ಚಿಕ್ಕಮಗಳೂರು : ಪೊಲೀಸರ ಕಿರುಕುಳದ ಆರೋಪ ಮಾಡಿ ನೇಣಿಗೆ ಶರಣಾಗಿದ್ದ ಆಟೋ ಚಾಲಕ ನಾಗೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಪೇದೆಯನ್ನು ಅರೆಸ್ಟ್ ಮಾಡಲಾಗಿದೆ.
ಸಿದ್ದೇಶ್ ಬಂಧಿತ ಪೊಲೀಸ್ ಸಿಬ್ಬಂದಿ. ಎಸ್, ಕಳೆದ ಆಗಸ್ಟ್ 13 ರಂದು ಕುದುರೆಮುಖ ಪೊಲೀಸ್ ಠಾಣೆಯ ಪೇದೆಯಿಂದ ಹಲ್ಲೆಗೊಳಗಾಗಿ ನ್ಯಾಯ ಸಿಗಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ನಾಗೇಶ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದರು. ಅಲ್ಲದೇ ಪ್ರಕರಣ ಸಂಬಂಧ ಪೊಲೀಸರ ವಿರುದ್ದ ಎಫ್.ಐ.ಆರ್ ಕೂಡ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಮೂವರು ಪೊಲೀಸರು ಎಸ್ಕೇಪ್ ಆಗಿದ್ದರು. ಎಸ್ಕೇಪ್ ಆದ ಪೊಲೀಸರ ಪತ್ತೆಗೆ ಎಸ್ಪಿ ವಿಕ್ರಂ ಅಮಟೆ ಅವರು ವಿಶೇಷ ತಂಡ ರಚಿಸಿದ್ದರು. ಕೊನೆಗೆ ವಿಶೇಷ ತಂಡದಿಂದ ಗೋವಾದಲ್ಲಿ ಪರಿಚಯಸ್ಥರ ಮನೆಯಲ್ಲಿದ್ದ ಪೇದೆ ಸಿದ್ದೇಶ್ ನನ್ನು ಬಂಧಿಸಲಾಗಿದೆ. ಅಲ್ಲದೇ ಸಿದ್ದೇಶ್ ಗೆ ಉಳಿದುಕೊಳ್ಳಲು ಆಶ್ರಯ ನಿಡಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಇನ್ನೂ ತಲೆಮರೆಸಿಕೊಂಡಿರುವ ಶಶಿ ಹಾಗು ಸುಪ್ರೀತ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.