ವಿಜಯಸಾಕ್ಷಿ ಸುದ್ದಿ, ಗದಗ: ಆಟೋ ಚಾಲಕರು ದಿನನಿತ್ಯ ತಮ್ಮ ಉಪಜೀವನಕ್ಕಾಗಿ ಹಗಲು-ರಾತ್ರಿ ಎನ್ನದೆ ಆಟೋ ಚಾಲನೆ ಮಾಡಿಕೊಂಡು ಬದುಕುತ್ತಿದ್ದಾರೆ. ಚಾಲನೆಯ ಜೊತೆಗೆ ಆಟೋ ಚಾಲಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ್ ಹೇಳಿದರು.
ಗದಗ ಜಿಲ್ಲಾ ಜೈ ಭೀಮ್ ಆಟೋ ರಿಕ್ಷಾ ಮಾಲಕರ ಸಂಘ, 76ನೇ ಪ್ರಜಾರಾಜ್ಯೋತ್ಸವದ ಅಂಗವಾಗಿ ಅಪಘಾತ ರಹಿತವಾಗಿ ಆಟೋ ಚಾಲನೆ ಮಾಡಿದ ಚಾಲಕರಿಗೆ ಅಭಿನಂದನಾ ಪ್ರಶಸ್ತಿ ಮತ್ತು ಸಮವಸ್ತ್ರ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಇತ್ತೀಚೆಗೆ ಸಾಕಷ್ಟು ಜನದಟ್ಟಣೆ ಆಗಿದೆ. ಜೊತೆಗೆ ದ್ವಿಚಕ್ರ ವಾಹನಗಳ ಸಂಖ್ಯೆ ಏರಿಕೆ ಕಂಡಿದ್ದು, ಆಟೋ ಸಂಖ್ಯೆಯೂ ಹೆಚ್ಚಾಗಿದೆ. ಇದರ ನಡುವೆಯೂ ಅತ್ಯಂತ ಜಾಗರೂಕತೆಯಿಂದ ಯಾವುದೇ ಅಪಘಾತ ಆಗದ ರೀತಿ ಚಾಲನೆ ಮಾಡುವುದು ಸವಾಲಿನ ಕೆಲಸ ಎಂದು ಹೇಳಿದರು.
ಸಾಕಷ್ಟು ಜನ ದಟ್ಟಣೆ ನಡುವೆಯೂ ಅಪಘಾತವಾಗದ ಹಾಗೆ ಚಾಲನೆ ಮಾಡಿದ ಆಟೋ ಚಾಲಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷದ ವಿಷಯವಾಗಿದೆ. ಎಲ್ಲಾ ಆಟೋ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಿದರೆ ಅದೊಂದು ದೊಡ್ಡ ಸಾಧನೆ ಆಗಲಿದೆ. ಎಲ್ಲಾ ಆಟೋ ಚಾಲಕರ ಜೀವನ ಉಜ್ವಲವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪರಶುರಾಮ ಪೂಜಾರ, ವಿನಾಯಕ ಬಳ್ಳಾರಿ, ಬಸವರಾಜ ಕಡೆಮನಿ, ಸುರೇಶ ಹುಲಿ, ಲಕ್ಷö್ಮಣ ಕಟ್ಟಿಮನಿ, ವಿಜಯ್ ಮುಳಗುಂದ, ಹರೀಶ್ ಭಾವಿಮನಿ, ಕೃಷ್ಣ ಪೂಜಾರ, ಭಾಷಾಸಾಬ್ ಮಲ್ಲಸಮುದ್ರ, ಚಾಂದಸಾಬ್ ಕೊಟ್ಟೂರ, ಎಸ್.ಎನ್. ಬಳ್ಳಾರಿ, ಬಿ.ಬಿ. ಅಸೂಟಿ, ಅಕ್ರ್ ಸಾಬ್ ಬಬರ್ಚಿ, ನಾಗರಾಜ ಮುಂತಾದವರು ಉಪಸ್ಥಿತರಿದ್ದರು.