ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಹಿಮಪಾತದ ನಡುವೆ, ಪ್ರವಾಸಿಗರ ಪ್ರಮುಖ ತಾಣವಾಗಿರುವ ಸೋನಾಮಾರ್ಗ್ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್ ಪ್ರವಾಸಿ ರೆಸಾರ್ಟ್ ಮೇಲೆ ಹಿಮದ ರಾಶಿ ಪ್ರವಾಹದಂತೆ ಹರಿದು ಬಂದಿದ್ದು, ರೆಸಾರ್ಟ್ ಸಂಪೂರ್ಣವಾಗಿ ಹಿಮದ ಅಡಿಯಲ್ಲಿ ಮುಚ್ಚಿಕೊಂಡಿದೆ.
ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 10.12ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೆಸಾರ್ಟ್ ಹಾಗೂ ಸುತ್ತಮುತ್ತಲಿನ ಕಟ್ಟಡಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದ್ದು,
ಬೃಹತ್ ಹಿಮಪಾತದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋಗಳಲ್ಲಿ ಕಟ್ಟಡಗಳ ಮೇಲೆ ಹಿಮದ ರಾಶಿ ಹರಿದುಬರುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ಈ ಹಿಮಪಾತದಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲ. ಆದರೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹಾಗೂ ಅಪಾಯಕಾರಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸೋನಾಮಾರ್ಗ್ ಸೇರಿದಂತೆ ಕಣಿವೆಯ ಹಲವಾರು ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಧ್ಯಮದಿಂದ ಭಾರಿ ಹಿಮ ಬೀಳುತ್ತಿದೆ. ಇದಕ್ಕೆ ಜೊತೆಗೆ, ರಾಜ್ಯದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಉತ್ತರಾಖಂಡದ ಬದರಿನಾಥ್, ಕೇದಾರನಾಥ ಸೇರಿದಂತೆ ಹಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವಾರದೊಳಗೆ ಇದು ರಾಜ್ಯದಲ್ಲಿ ಸಂಭವಿಸಿರುವ ಎರಡನೇ ಹಿಮಪಾತವಾಗಿದೆ. ಇದಕ್ಕೂ ಮುನ್ನ ಜನವರಿ 23ರಂದು ಸಂಭವಿಸಿದ್ದ ಭಾರಿ ಹಿಮಪಾತವು ಎತ್ತರದ ಪ್ರದೇಶಗಳನ್ನು ಆವರಿಸಿತ್ತು. ಈ ಹಿನ್ನೆಲೆ, ಹಿಮಪಾತದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಿದೆ.



