ಇತ್ತೀಚಿನ ದಿನಗಳಲ್ಲಿ ಲಿವರ್ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಅಸ್ವಸ್ಥ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ ಹಾಗೂ ಜಂಕ್ ಫುಡ್ ಸೇವನೆ ಇದರ ಪ್ರಮುಖ ಕಾರಣಗಳಾಗಿವೆ.
ಲಿವರ್ ದೇಹದ ಪ್ರಮುಖ ಅಂಗವಾಗಿದ್ದು, ದೇಹವನ್ನು ಡಿಟಾಕ್ಸ್ ಮಾಡುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಹಾಗೂ ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುವ ಮಹತ್ವದ ಕೆಲಸ ಮಾಡುತ್ತದೆ. ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಫ್ಯಾಟಿ ಲಿವರ್, ಹೆಪಟೈಟಿಸ್ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಆರೋಗ್ಯ ತಜ್ಞರ ಪ್ರಕಾರ, ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ತಪ್ಪಿಸುವುದು ಅಗತ್ಯ. ವಿಶೇಷವಾಗಿ ಹೆಚ್ಚು ಎಣ್ಣೆಯಲ್ಲಿ ತಯಾರಿಸಿದ ಕರಿದ ಪದಾರ್ಥಗಳು ದೇಹದಲ್ಲಿ ಕೊಬ್ಬು ಹೆಚ್ಚಿಸಿ ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗಬಹುದು. ಅದೇ ರೀತಿ ಅತಿಯಾದ ಸಕ್ಕರೆ ಇರುವ ಆಹಾರಗಳು ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
ಇನ್ನು ಪ್ರೊಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳಲ್ಲಿ ಇರುವ ರಾಸಾಯನಿಕಗಳು ಮತ್ತು ಪ್ರಿಸರ್ವೇಟಿವ್‌ಗಳು ಲಿವರ್‌ಗೆ ಹಾನಿಕಾರಕವಾಗಬಹುದು. ಹೀಗಾಗಿ ಇವುಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.
ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿರು ತರಕಾರಿ, ಹಣ್ಣು ಹಾಗೂ ಫೈಬರ್ ಸಮೃದ್ಧ ಆಹಾರಗಳನ್ನು ಸೇವಿಸುವುದು ಮುಖ್ಯ. ಪಾಲಕ್, ಬ್ರೋಕೋಲಿ, ಕ್ಯಾರೆಟ್, ಬೀಟ್‌ರೂಟ್ ಮುಂತಾದವು ಲಿವರ್‌ಗೆ ಸಹಾಯಕವಾಗುತ್ತವೆ. ಜೊತೆಗೆ ಬೆಳ್ಳುಳ್ಳಿ ಮತ್ತು ಅರಿಶಿನ ದೇಹದ ವಿಷಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತವೆ.
ಸಾಕಷ್ಟು ನೀರು ಕುಡಿಯುವುದು, ನಿಯಮಿತ ವ್ಯಾಯಾಮ ಮಾಡುವುದು, ತೂಕವನ್ನು ನಿಯಂತ್ರಣದಲ್ಲಿಡುವುದು ಮತ್ತು ಮದ್ಯಪಾನದಿಂದ ದೂರವಿರುವುದು ಲಿವರ್ ಆರೋಗ್ಯಕ್ಕೆ ಅಗತ್ಯ. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯಬಹುದು.



