ವಿಜಯಸಾಕ್ಷಿ ಸುದ್ದಿ, ಡಂಬಳ: ಸಹಾನುಭೂತಿ, ಪ್ರಾಮಾಣಿಕತೆ, ಶ್ರಮ ಮತ್ತು ನೈತಿಕ ಬದ್ಧತೆಯ ಮೂಲಕ ಪಾಠವನ್ನು ಸರಳ, ಸುಗಮ ಹಾಗೂ ಸ್ಫೂರ್ತಿದಾಯಕವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ 24 ವರ್ಷಗಳಿಂದ ಹಿಂದಿ ವಿಷಯವನ್ನು ಬೋಧಿಸುತ್ತಾ ಬಂದಿರುವ ಜೈಬುನ್ನಿಸಾ ಉಮರಸಾಬ ನಮಾಜಿ (ಹಿರೇಹಾಳ) ಅವರ ಉತ್ತಮ ಸೇವೆಗೆ ಮುಂಡರಗಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.
ತಂದೆ ಉಮರಸಾಬ-ತಾಯಿ ರಜಿಯಾಬೇಗಂ. ಹುಬ್ಬಳ್ಳಿಯಲ್ಲಿ ಹಿಂದಿ ವಿಷಯದಲ್ಲಿ ಬಿ.ಎಡ್, ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಎಂ.ಎ. ಶಿಕ್ಷಣ ಪಡೆದುಕೊಂಡರು. ಡಂಬಳ ಗ್ರಾಮದ ಉರ್ದು ಶಾಲೆಯ ಉತ್ತಮ ಶಿಕ್ಷಕರಾಗಿದ್ದ ಜೀವನಸಾಬ ಹಿರೇಹಾಳ ಅವರ ಕೈಹಿಡಿದರು. 2002ರಲ್ಲಿ ಮುಂಡಗೋಡದ ಮೊರಾರ್ಜಿ ವಸತಿ ಶಾಲೆ, ಗದಗ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಡಂಬಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸೇವೆ ಸಲ್ಲಿಸಿ, ಸದ್ಯ ಮುಂಡರಗಿ ನಗರದ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದಿ ವಿಷಯದಲ್ಲಿ ಪ್ರತಿವರ್ಷ ಶೇ.100ರಷ್ಟು ಫಲಿತಾಂಶವನ್ನು ನೀಡಿದ ಹಿನ್ನೆಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಗದಗ ಜಿಲ್ಲಾ ಹಿಂದಿ ವಿಷಯದಲ್ಲಿ ಉತ್ತಮ ಮಾರ್ಗದರ್ಶಕಿ ಪ್ರಶಸ್ತಿ, ಇತ್ತೀಚೆಗೆ ಮುಂಡರಗಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
“ವಿದ್ಯಾರ್ಥಿಗಳು ತಮ್ಮನ್ನು ನಿರಂತರ ಜ್ಞಾನದೆಡೆಗೆ ತೊಡಗಿಸಿಕೊಂಡಾಗ ಪರಿಶ್ರಮದ ಫಲ ಉತ್ತಮವಾಗಿರುತ್ತದೆ. ಪರಿಶ್ರಮ, ತ್ಯಾಗ, ಹಾಗೂ ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ತೋರಿಸುವ ನಿಷ್ಠೆಯನ್ನು ಗುರುತಿಸಿ ಇಲಾಖೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿರುವದು ಸಂತೋಷ ತಂದಿದೆ”
ಜೈಬುನ್ನಿಸಾ ಉ. ನಮಾಜಿ (ಹಿರೇಹಾಳ)
“ಶಿಕ್ಷಕರೇ ಸಮಾಜದ ಶಿಲ್ಪಿಗಳು. ಅವರೇ ಹೊಸ ಪೀಳಿಗೆಯ ಕನಸುಗಳನ್ನು ರೂಪಿಸುವವರು. ಜ್ಞಾನ–ಮೌಲ್ಯಗಳನ್ನು ಬಿತ್ತುವವರು. ಆ ಹಿನ್ನೆಲೆ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಜೈಬುನ್ನಿಸಾ ನಮಾಜಿ ಅವರ ಉತ್ತಮ ಸೇವೆಯನ್ನು ಗುರುತಿಸಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿರುವುದು ಪ್ರಶಂಸನೀಯ”
ಗಂಗಾಧರ ಅಣ್ಣಿಗೇರಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಮುಂಡರಗಿ.