ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿ ಪ್ರೇರಣ ರಜಪೂತ್ ಚಿಣ್ಣರ ಚಿತ್ತಾರ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ.
ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ, ಬಾಲ ಭವನ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ಪರ್ದೆ ನಡೆದಿತ್ತು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಚಿಣ್ಣರ ಚಿತ್ತಾರ 2023-24 ರಾಷ್ಟ್ರ ಮಟ್ಟದ ಚಿತ್ರಕಲೋತ್ಸವ ಸ್ಪರ್ದೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ 2 ಸಾವಿರಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿದ್ದರು.
ಇದರಲ್ಲಿ ವಿದ್ಯಾರ್ಥಿ ಪ್ರೇರಣ ಸರ್ಟಿಪಿಕೆಟ್ ಆವಾರ್ಡ್ ಪಡೆದಿದ್ದು, ವಿದಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಪ್ರಶಸ್ತಿಯನ್ನು ವಿತರಿಸಿದರು. ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಆರ್.ಎಸ್ ಹಾದಿಮನಿ ಅವರಿಗೆ ದೃಶ್ಯಕಲಾ ಚಿಂತನಾಕಾರ ಪ್ರಶಸ್ತಿ ಲಭಿಸಿದೆ. ವಿಜೇತ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಮುಖ್ಯೋಪಾಧ್ಯಾಯ ರವಿ ಉದ್ಧಣ್ಣವರ ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ.