ಬೆಂಗಳೂರು:- ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರತಿ ವರ್ಷ 5 ಪರಿಸರವಾದಿಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ವತಿಯಿಂದ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ -2025 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ದತ್ತಿ ನಿಧಿಯನ್ನು ಸ್ಥಾಪಿಸಿ ಠೇವಣಿ ಇರುವ ಹಣದ ಬಡ್ಡಿಯಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಲಾಗುವುದು ಹಾಗೂ ಕನಿಷ್ಠ 5 ಪರಿಸರವಾದಿಗಳಿಗೆ ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಲಾಗುವುದು ಎಂದರು.
ಇಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜನ್ಮದಿನ. 1974ರ ಇಂದಿನ ದಿನದಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿತವಾಯಿತು. ಇಂದಿರಾ ಗಾಂಧಿಯವರು ಪರಿಸರ ಮತ್ತು ಅರಣ್ಯ ರಕ್ಷಣೆಗೆ ಹಲವು ಪ್ರಮುಖ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಪರಿಸರ ಸಂರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ ಮೇಲಿಲ್ಲ. ಸಾರ್ವಜನಿಕರು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಭೂಮಿಯ ಮೇಲಿನ ಜೀವಸಂಕುಲಕ್ಕೆ ಉತ್ತಮ ಪರಿಸರದಲ್ಲಿ ಬದುಕಲು ಅವಶ್ಯ.ಮಾಲಿನ್ಯ ರಹಿತ ಪರಿಸರವನ್ನು ನಿರ್ಮಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.
ನಾವು ಉಸಿರಾಡುವ ಗಾಳಿ, ನೀರು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ.ಕೇಂದ್ರದ ವರದಿಯ ಪ್ರಕಾರ ದೇಶದ ಹಲವು ನಗರಗಳು ಮಾಲಿನ್ಯದಿಂದ ಕೂಡಿವೆ. ಈ ಪಟ್ಟಿಯಲ್ಲಿ ಬೆಂಗಳೂರು,ದಾವಣಗೆರೆ, ಕಲ್ಬುರ್ಗಿ ನಗರವೂ ಸೇರಿರುವುದು ಆತಂಕಕಾರಿ ವಿಷಯ. ನಮ್ಮ ರಾಜ್ಯವನ್ನು ವಾಸಯೋಗ್ಯವಾಗಿಸಲು , ಜನರೆಲ್ಲರೂ ಪರಿಸರ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


