ವಿಜಯಸಾಕ್ಷಿ ಸುದ್ದಿ, ಡಂಬಳ : ಇಲ್ಲಿನ ಕಪ್ಪತ್ತಗುಡ್ಡದಲ್ಲಿ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀಸಿದ್ದೇಶ್ವರ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸ್ವಯಂ ಸೇವಕರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡುವ ಮೂಲಕ ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಾಜು ಡಾವಣಗೇರಿ, ಜಾತ್ರೆಗೆ ಬರುವ ಭಕ್ತರು ಹಾಗೂ ಪ್ರವಾಸಿಗರು ಕಪ್ಪತ್ತಗುಡ್ಡದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು, ಪರಿಸರವಾದಿಗಳು ಭೇಟಿ ನೀಡುವದರಿಂದ ಕಪ್ಪತ್ತಗುಡ್ಡದ ಮಹತ್ವ ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಸಾರ್ವಜನಿಕರು ಪರಿಸರದ ಮಹತ್ವದ ಕುರಿತು ಇನ್ನೂ ಹೆಚ್ಚು ಕಾಳಜಿ ವಹಿಸಬೇಕು. ಕಪ್ಪತ್ತಗುಡ್ಡ ಬೆಲೆ ಕಟ್ಟಲಾಗದ ಅಮೂಲ್ಯ ವನ್ಯಜೀವಿಗಳ, ಹಲವು ವಿವಿಧ ಔಷಧೀಯ ಸಸ್ಯಗಳ ಜೀವನಾಡಿಯಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಸಿದ್ದು ಅಂಗಡಿ, ಸಮಿತಿಯ ಸದಸ್ಯರಾದ ಎಂ.ಎಸ್. ಹೊಟ್ಟಿನ, ಶಿಕ್ಷಕ ನೀಲಪ್ಪ ಹಕ್ಕಂಡಿ, ಅಂಬರೇಶ ಬಚನಹಳ್ಳಿ, ಅರಣ್ಯ ಇಲಾಖೆಯ ಗೋಪಾಲ ನಾಯಕ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.