ವಿಜಯಸಾಕ್ಷಿ ಸುದ್ದಿ, ಗದಗ : ಐ.ಸಿ.ಎ.ಆರ್–ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹುಲಕೋಟಿಯ ಐ.ಸಿ.ಎ.ಆರ್–ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂಧನ ಸಾಮರ್ಥ್ಯ ಪಂಪ್‌ಸೆಟ್‌ಗಳು ಹಾಗೂ ನೀರು ಸಂರಕ್ಷಣೆ ಕುರಿತು ಒಂದು ದಿನದ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಧಾರವಾಡದ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಸವಿತಾ ಮೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನೀರಾವರಿ ಇರುವ ರೈತರು ಡೀಸೆಲ್ ಪಂಪುಗಳನ್ನು ವರ್ಜಿಸಿ ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿ ಹಾಗೂ ಪವನಶಕ್ತಿಯಿಂದ ಚಲಿಸುವ ಪಂಪುಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಬೇಕು. ಐ.ಎಸ್.ಐ ಚಿಹ್ನೆ ಇರುವ 5 ಸ್ಟಾರ್‌ಗಳುಳ್ಳ ವಿದ್ಯುತ್ ಪಂಪುಗಳನ್ನೇ ಖರೀದಿಸಬೇಕು ಎಂದು ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ವಿಜ್ಞಾನಿ ಎಸ್.ಕೆ. ಮುದ್ಲಾಪುರ ಮಾತನಾಡಿ, ಮುಂದಿನ ಪೀಳಿಗೆಗೆ ನೀರು ಉಳಿಸಲು ನಾವು ಇಂದಿನಿಂದಲೇ ನೀರಿನ ಸಂರಕ್ಷಣೆ ಮಾಡಬೇಕು. ಮಳೆಯಾಶ್ರಿತ ರೈತ ಬಾಂಧವರು ಮಳೆ ನೀರು ಜಮೀನಿನಲ್ಲಿ ನಿಲ್ಲಿಸಿ ಇಂಗುವಂತೆ ಮಾಡಲು ಕಾರ್ಯಯೋಜನೆ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿ ಡಾ. ವಿನಾಯಕ ನಿರಂಜನ್ ರೈತರಿಗೆ ತರಬೇತಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಎನ್.ಎಚ್. ಭಂಡಿ ಇವರು ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ತಾಂತ್ರಿಕ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಯಿತು. ಸವಿತಾ ಮೇಟಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. ವಿಜ್ಞಾನಿಗಳಾದ ಡಾ. ವಿನಾಯಕ ನಿರಂಜನ್, ಎನ್.ಎಚ್. ಭಂಡಿ ಹಾಗೂ ಹೇಮಾವತಿ ಹಿರೇಗೌಡರ್ ತರಬೇತಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ರೈತರಿಗೆ ವಿವರಿಸಿದರು. ತರಬೇತಿ ಕಾರ್ಯಕ್ರಮದಲ್ಲಿ 52ಕ್ಕೂ ಹೆಚ್ಚು ರೈತರು ಹಾಗೂ ಪಂಪ್‌ಸೆಟ್ ತಂತ್ರಜ್ಞರು ಭಾಗವಹಿಸಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವ್ಹಿ.ಮಂಕಣಿ ಮಾತನಾಡಿ, ನೀರಾವರಿ ವಿದ್ಯುತ್ ಪಂಪುಗಳನ್ನು ಆಯ್ಕೆ ಮಾಡುವಾಗ ರೈತರು ಅಸಡ್ಡೆ ತೋರದೆ, ಹೆಚ್ಚು ದಕ್ಷತೆಯುಳ್ಳ ಹಾಗೂ ಕಡಿಮೆ ವಿದ್ಯುತ್ ಬಳಕೆ ಮಾಡುವ ಪಂಪುಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.



