ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು-ನೆರವು ಮತ್ತು ಮಾನವಹಕ್ಕುಗಳ ಘಟಕದಿಂದ `ವ್ಯಾಜ್ಯಮುಕ್ತ ಗ್ರಾಮ’ಕ್ಕಾಗಿ ಗ್ರಾಮಗಳನ್ನು ದತ್ತು ಪಡೆದು, ಆ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ, ಶ್ಯಾಬಳ, ಸಂಕನಾಳ ಮತ್ತು ಕೊಂಡಿಕೊಪ್ಪ ಗ್ರಾಮಗಳನ್ನು ದತ್ತು ಪಡೆದಿದ್ದು, ಆ ಗ್ರಾಮಗಳನ್ನು ವಿಶೇಷವಾಗಿ ಕೇಂದ್ರೀಕರಿಸಿ, ಅಲ್ಲಿನ ಜನರೊಂದಿಗೆ ಸಂವಾದ, ಚರ್ಚೆ ಮೂಲಕ ‘ವ್ಯಾಜ್ಯ ಮುಕ್ತ’ ಗ್ರಾಮಕ್ಕೆ ಅವರ ಸಹಕಾರದ ಬಗ್ಗೆ ತಿಳಿವಳಿಕೆ ಹೇಳಲಾಗುತ್ತಿದೆ ಎಂದು ಎಸ್.ಕೆ. ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾನೂನು, ನ್ಯಾಯ, ಶಾಸನ ರಚನೆ, ಮಾನವ ಹಕ್ಕುಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಕೆ ಪಾಟೀಲರು ಗ್ರಾಮ ನ್ಯಾಯಾಲಯಗಳ ಕಾಯ್ದೆಯ ಅನ್ವಯ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಿ ನ್ಯಾಯ ಒದಗಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವುದು, ನ್ಯಾಯ ವಿತರಣೆ ವ್ಯವಸ್ಥೆಯನ್ನು ಗ್ರಾಮ ಮಟ್ಟದ ಜನರ ಬಾಗಿಲಿಗೆ ಕೊಂಡೊಯ್ಯುವುದು ಮತ್ತು ಯಾವುದೇ ವ್ಯಕ್ತಿ ನ್ಯಾಯ ಪಡೆಯುವಲ್ಲಿ ವಂಚಿತನಾಗಬಾರದು ಎನ್ನುವ ಉದ್ದೇಶ ಹೊಂದಿದ್ದಾರೆ. ಕಾನೂನು ಸಚಿವರು ಕರ್ನಾಟಕದಲ್ಲಿರುವ ಎಲ್ಲಾ ಗ್ರಾಮಗಳಲ್ಲಿ ಗ್ರಾಮಸ್ಥರಲ್ಲಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸಲು ದೃಢಸಂಕಲ್ಪ ಮಾಡಿ ಪ್ರಾಯೋಗಿಕವಾಗಿ ನಾಡಿನ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ವ್ಯಾಜ್ಯಮುಕ್ತ ಗ್ರಾಮ ಮಾಡಲು ಆನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದರು.
ಮಾನವ ಸಮಾಜ ವಿಕಾಸದಲ್ಲಿ ನ್ಯಾಯಾಂಗ ಒಂದು ಸ್ವತಂತ್ರ ಶಕ್ತಿಯಾಗಿ ಬೆಳೆದುಬಂದಿದೆ. ಇಂದಿನ ಇವತ್ತು ನ್ಯಾಯಾಂಗ ಇಲ್ಲದ್ದಿದ್ದರೆ ನಾಗರಿಕ ಸಮಾಜ ಅಲ್ಲೋಲಕಲ್ಲೋಲವಾಗುತ್ತಿತ್ತು. ಅನ್ಯಾಯಕ್ಕೆ ಒಳಗಾದವರು ನ್ಯಾಯಾಲಯದ ಮೂಲಕ ನ್ಯಾಯವನ್ನು ಪಡೆಯುತ್ತಿದ್ದಾರೆ. ಆದರೂ ಇನ್ನೂ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ.
ಶಾಂತಿ ಇರುವೆಡೆ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕರೆ ಅವರು ತೃಪ್ತಿ ಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅವರು ಅಸಮಾಧಾನಗೊಳ್ಳುತ್ತಾರೆ. ಬಡವ-ಬಲ್ಲಿದ, ಅನಕ್ಷರಸ್ಥರು, ಸಬಲ-ದುರ್ಬಲರೆಂಬ ಬೇಧ-ಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಸಂಸ್ಥೆಗಳೆಂದರೆ ನ್ಯಾಯಾಲಯಗಳು. ಈಗಾಗಲೇ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳು ಜನರಿಗೆ ಕಾನೂನು ಅರಿವು-ನೆರವು ಜೊತೆಗೆ ಲೋಕ ಅದಾಲತ್‌ಗಳನ್ನು ಏರ್ಪಡಿಸಿ ರಾಜೀ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡುತ್ತಾ ಬಂದಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮೂಲಿಮನಿ, ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ, ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯದ ಉಪಾಧ್ಯಕ್ಷ, ವಕೀಲ ಎಸ್.ಕೆ. ನದಾಫ್, ಮಹಾವಿದ್ಯಾಲಯದ ಪ್ರಾಚಾರ್ಯೆ ಪಲ್ಲವಿ ಎಸ್.ಬುಯ್ಯಾರ್, ಕಾನೂನು ಅರಿವು-ನೆರವು ಮತ್ತು ಮಾನವ ಹಕ್ಕುಗಳ ಘಟಕದ ಸಂಯೋಜಕಿ ನಾಜೀಮಾ ಎನ್.ಮುಲ್ಲಾ, ಸಹಾಯಕ ಉಪನ್ಯಾಸಕರಾದ ಎಸ್.ಐ ಅಣ್ಣಿಗೇರಿ, ಎನ್‌ಎಸ್‌ಎಸ್ ಘಟಕದ ಸಂಯೋಜಕ ಮಹಾಂತೇಶ ಕೊರಡಕೇರಿ, ಯೂಥ್ ರೆಡ್ ಕ್ರಾಸ್ ಘಟಕದ ಸಂಯೋಜಕ ವಿಶ್ವನಾಥ ಹಿರೇಮಠ, ಸಂಸ್ಕೃತಿಕ ವಿಭಾಗದ ಎಮ್.ವಿ. ಹಿರೇಮಠ, ಡಿ.ಎಲ್. ಕುಲಕರ್ಣಿ, ಸಂಗೀತಾ ಪಾಟೀಲ, ಬಸಮ್ಮ ಎಚ್, ಮಹಾಂತೇಶ ಮಡ್ಡಿ, ಅನುಸೂಯಾ ಕೇರಿ ಹಾಗೂ ಗ್ರಂಥಪಾಲಕ ಎನ್.ವಿ. ರಾಥೋಡ್ ಉಪಸ್ಥಿತರಿದ್ದರು.
ವ್ಯಾಜ್ಯ ಮುಕ್ತ ಗ್ರಾಮದ ಪಿತಾಮಹ ಗಾಂಧೀಜಿ ಕಂಡ ಕನಸನ್ನು ಕಾನೂನು ಸಚಿವರಾದ ಡಾ. ಎಚ್.ಕೆ. ಪಾಟೀಲ ನನಸು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ನಾವು ಕೂಡ ನಮ್ಮ ಕಾನೂನು ಮಹಾವಿದ್ಯಾಲಯದಿಂದ ಪ್ರಾಯೋಗಿಕವಾಗಿ ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ, ಸಂಕದಾಳ, ಕೊಂಡಿಕೊಪ್ಪ ಮತ್ತು ಶ್ಯಾಬಳ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ವ್ಯಾಜ್ಯಮುಕ್ತ ಗ್ರಾಮ ಅಭಿಯಾನ ಕೈಗೊಂಡಿದ್ದು, ಮಾಧ್ಯಮದವರ ಸಹಕಾರ ಅಗತ್ಯವಾಗಿದೆ.
– ಎಸ್.ಕೆ. ನದಾಫ್.
ವಕೀಲರು, ಉಪಾಧ್ಯಕ್ಷರು
ಎಚ್‌ಸಿಇಎಸ್ ಕಾನೂನು ಮಹಾವಿದ್ಯಾಲಯ.