ವಿಜಯಸಾಕ್ಷಿ ಸುದ್ದಿ, ಗದಗ : ಮತದಾನ ಪ್ರಮಾಣ ಹೆಚ್ಚಳಕ್ಕೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ ಹೇಳಿದರು.
ಗದಗ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಸಾರ್ವತಿಕ ಚುನಾವಣೆಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾದ ಕೇಂದ್ರಗಳಾದ ಕಳಸಾಪೂರ ಹಾಗೂ ನಾಗಾವಿ ಗ್ರಾಮಗಳಲ್ಲಿ ಶನಿವಾರ ವಾಕಥಾನ್ ಹಾಗೂ ಮನೆ-ಮನೆ ಭೇಟಿ, ನ್ಯಾಯ ಬೆಲೆ ಅಂಗಡಿ ಭೇಟಿ ಕಾರ್ಯಕ್ರಮದ ನಿಮಿತ್ತ ಮಾತನಾಡಿದರು.
ಮೇ.7ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ, ಮತದಾನಕ್ಕೆ ಸಂಬಂಧಿಸಿದಂತೆ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸಿ, ವೋಟರ್ ಮಾರ್ಗಸೂಚಿಗಳನ್ನು ನೀಡುತ್ತಿದ್ದಾರೆ. ಅವುಗಳನ್ನು ಓದಿಕೊಂಡು ಯಾವುದೇ ಗೊಂದಲಗಳಿಲ್ಲದೇ ಯಾವುದಾದರೊಂದು ಅಧಿಕೃತ ಗುರುತಿನ ಕಾರ್ಡ್ ತೋರಿಸಿ ಮತದಾನ ಮಾಡಬೇಕೆಂದರು.
ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ಗ್ರಾಮದಲ್ಲಿ ವಲಸೆ ಹೋದ ಮತದಾರರಿಗೆ ಮುಂಚಿತವಾಗಿ ತಿಳಿಸಿ ಅವರನ್ನು ಮತದಾನ ದಿನದಂದು ಗ್ರಾಮಕ್ಕೆ ಬಂದು ಮತ ಚಲಾಯಿಸಲು ತಿಳಿಸಬೇಕು ಎಂದರು.
ಈ ವೇಳೆ ಪಂಚಾಯತ ಅಭಿವೃದ್ಧಿ ಅಧಿಕಾರಿ, ಪಂಚಾಯತ ಸಿಬ್ಬಂದಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಹಾಜರಿದ್ದರು.