HomeGadag Newsಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನ

ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

ಕಾರ್ಯಕ್ರಮವನ್ನು ತಹಸೀಲ್ದಾರ ವಾಸುದೇವ ಸ್ವಾಮಿ ಉದ್ಘಾಟಿಸಿ ಮಾತನಾಡಿ, ದೇವಸ್ಥಾನಗಳು ನಮ್ಮ ಹೆಮ್ಮೆಯ ಪ್ರತೀಕ. ಅಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರಬೇಕು. ಪ್ರಾಚೀನ ದೇವಸ್ಥಾನಗಳಲ್ಲಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಕಲಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ. ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನವಾಗಿದೆ. ನಿತ್ಯದ ಬದುಕಿನ ಜಂಜಾಟದ ನಡುವೆಯೂ ದೇವರು, ಧರ್ಮ, ಸತ್ಸಂಗ, ಶಿವ ಸ್ಮರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ. ಮಕ್ಕಳನ್ನು ಇಂತಹ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುವಂತೆ ಮಾಡುವದು ಅವಶ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅರ್ಚಕರ ಸಂಘದ ಅಧ್ಯಕ್ಷ ವಿ.ಎಲ್. ಪೂಜಾರ, ಶ್ರೀ ಸೋಮೇಶ್ವರ ಭಕ್ತರ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿ, ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ ಹಬ್ಬ, ಆಚರಣೆಗಳ ಪ್ರತೀಕವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಇವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಡಾ. ಸುಧಾಮೂರ್ತಿಯವರು ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪುಲಿಗೆರೆ ಉತ್ಸವದಂತೆ ಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವು ಸಹ ಮೆರಗು ನೀಡುವಂತೆ ಆಯೋಜಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ವಸಂತ ಪಾಟೀಲ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಅರ್ಚಕರಾದ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸಯ್ಯ ಪೂಜಾರ, ಸಮೀರ ಪೂಜಾರ ಮುಂತಾದವರಿದ್ದರು. ಶ್ವೇತಾ ಪೂಜಾರ ಸ್ವಾಗತಿಸಿದರು. ದಿಗಂಬರ ಪೂಜಾರ ನಿರೂಪಿಸಿ, ವಂದಿಸಿದರು.

ಹುಬ್ಬಳ್ಳಿಯ ಸಂಕಲ್ಪ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಹನಾ ಬನ್ನಿಗಿಡದ ಅವರ ತಂಡದ ಭರತನಾಟ್ಯ, ಬಸವಣ್ಣನವರ ವಚನದ ಜಾನಪದ ನೃತ್ಯ, ಕಂಸಾಳೆ ನೃತ್ಯವನ್ನು ಪ್ರದರ್ಶಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಿದರು. ನಂತರ ಲಕ್ಷ್ಮೇಶ್ವರದ ವೀರೇಶ ನಡಕಟ್ಟಿನ ಹಾಗೂ ತಂಡದಿಂದ ವೀರಗಾಸೆ, ಹುಬ್ಬಳ್ಳಿಯ ಗುರು ವಿದ್ವಾನ್ ಸುಜಯ ಶಾನಭಾಗ್ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಚಂದನಾ ಕಳಸಾಪುರ, ಸಾನ್ವಿ ಸುಣಗಾರ, ದಾನೇರ್ಶವರಿ ಮಾದಾಪುರಮಠ, ಸ್ಪಂದನ ಡಿ.ಎನ್, ಶಿರೀಶ್ ಸುಣಗಾರ, ಸಿಂಚನಾ ಆದಿ ಭರತನಾಟ್ಯದ ವಿವಿಧ ರೂಪಕಗಳನ್ನು ಅದ್ಭುತವಾಗಿ ಪ್ರದರ್ಶಿಸಿದರು. ಬೆಂಗಳೂರಿನ ಭರತನಾಟ್ಯ ಕಲಾವಿದೆ ತೇಜೋಮಯಿ ಗದ್ದಿ ಹಾಗೂ ಅಮೃತವಾಣಿ ಆರ್ ಭರತನಾಟ್ಯ ಪ್ರದರ್ಶನದ ಮೂಲಕ ಶಿವರಾತ್ರಿ ಸಂಭ್ರಮಕ್ಕೆ ತೆರೆಕಂಡಿತು.

ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆರಂಭದಲ್ಲಿ ಸ್ಥಳೀಯ ಕಲಾವಿದ ರಾಘವೇಂದ್ರ ಕ್ಷತ್ರಿಯ ಬಾನ್ಸುರಿ ವಾದನದ ಮೂಲಕ ಎಲ್ಲರ ಗಮನ ಸೆಳೆದರು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು. ಬೆಂಗಳೂರಿನ ಭರತನಾಟ್ಯ ಕಲಾವಿದೆ ವಿ.ದೀಪಿಕಾ ಎಚ್.ಎಸ್. ಇವರಿಂದ ಶಿವಶಕ್ತಿ ಆರಾಧನೆ ಪ್ರದರ್ಶನ ಅತ್ಯದ್ಭುತವಾಗಿ ಮೂಡಿಬಂದಿತು. ಪಟ್ಟಣದ ಸಂಗೀತ ಶಿಕ್ಷಕ ಕಲಾವಿದ ಪರಶುರಾಮ್ ಭಜಂತ್ರಿ ಹಾಗೂ ಒಡೆಯರ ಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಡಾ.ಅರ್ಜುನ ವಠಾರ ತಂಡದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!