ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸುರಕ್ಷಿತ ಹಾಗೂ ಗುಣಮಟ್ಟ ಆಹಾರವು ಮಾನವನ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿದ್ದು, ಮನುಷ್ಯನ ಆರೋಗ್ಯಕರ ಬೆಳವಣಿಗೆಗೆ ಮತ್ತು ಅಂಗಾಂಗಗಳ ಉತ್ತಮ ಕಾರ್ಯ ನಿರ್ವಹಣೆಗೆ ಪೂರಕವಾಗಿದೆ. ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಸರ್ವರ ಜವಾಬ್ದಾರಿಯಾಗಿದೆ ಎಂದು ಗದಗ ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ. ರಾಜೇಂದ್ರ ಎಸ್.ಗಡಾದ ಹೇಳಿದರು.
ಅವರು ಶನಿವಾರ ಪಟ್ಟಣದ ಫೀನಿಕ್ಸ್ ಇಂಟರ್‌ನ್ಯಾಷನಲ್, ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆರೋಗ್ಯ ಇಲಾಖೆ ಹಾಗೂ ಸ್ಫೂರ್ತಿ ಶಿಕ್ಷಣ ಮತ್ತು ವಿವಿಧೋದ್ದೇಶಗಳ ಅಭಿವೃದ್ಧಿ ಸಂಸ್ಥೆ ಇವುಗಳ ಆಶ್ರಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸುರಕ್ಷಿತ ಆಹಾರ ಮತ್ತು ಗುಣಮಟ್ಟ ಆಹಾರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಎಸ್.ಬಿ.ಕೊಣ್ಣೂರ ಅವರು ಮಾತನಾಡಿದರು. ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಶಿವಯೋಗಿ ಗಾಂಜಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಖಜಾಂಚಿ ಕಿರಣ ನಾಲ್ವಾಡ ವಹಿಸಿದ್ದರು. ಕುಮಾರಸ್ವಾಮಿಮಠ ಪ್ರಾರ್ಥಿಸಿದರು.
ಶಿಕ್ಷಕಿ ಶಾಂಭವಿ ಅಕ್ಕುರ ಸ್ವಾಗತಿಸಿದರು. ಶಿಕ್ಷಕ ಕಾಂತೇಶ್ ಮುದುಗಲ್ ನಿರೂಪಿಸಿ ವಂದಿಸಿದರು.