ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಷ್ಟ್ರೀಯ ಯೋಜನೆಗಳು, ಆದ್ಯತೆಗಳು ಮತ್ತು ದೇಶದ ಗುರಿಗಳನ್ನು ರೂಪಿಸುವಲ್ಲಿ ದೇಶದ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಪ್ರಧಾನಮಂತ್ರಿಗಳ ದೂರ ದೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಂವಹನ ಇಲಾಖೆ ವತಿಯಿಂದ ವಿಕಸಿತ ಭಾರತ-2047ರ ಮಾಹಿತಿಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೇಂದ್ರ ಸಂವಹನ ಇಲಾಖೆ, ತಾಲೂಕಾಡಳಿತ, ತಾ.ಪಂ. ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ, ಕೃಷಿ, ತೋಟಗಾರಿಕೆ, ಪೊಲೀಸ್, ಶಿಕ್ಷಣ ಇಲಾಖೆ, ಪುರಸಭೆ ಹಾಗೂ ವಿವಿಧ ಶಾಲಾ-ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ, ವಿಕಸಿ ಭಾರತ ಬಜೆಟ್, ದೂರದೃಷ್ಟಿ-2047 ಏಕ್ ಭಾರತ ಶ್ರೇಷ್ಠ ಭಾರತ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರು ಪ್ರಥಮ ಬಾರಿಗೆ ಪ್ರಧಾನಿಯಾದ ಮೇಲೆ ಕೆಂಪುಕೋಟೆಯ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ಮನೆಗೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಕರೆ ನೀಡಿರುವದನ್ನು ಅನೇಕರು ಟೀಕಿಸಿದ್ದರು. ಆದರೆ ಶೌಚಾಲಯವನ್ನು ನಿರ್ಮಿಸಿಕೊಳ್ಳುವದರಿಂದ ಪ್ರತಿಯೊಬ್ಬ ಮಹಿಳೆಯರ ಮಾನವನ್ನು ಕಾಪಾಡಿಕೊಳ್ಳುವ ಕಾರ್ಯವನ್ನು ಮಾಡುವ ಉದ್ದೇಶ ಅವರದ್ದಾಗಿತ್ತು. ಕೇಂದ್ರ ಸರಕಾರದ ಯೋಜನೆಗಳು ಮನೆ ಮನೆಗೆ ಮುಟ್ಟಿವೆ ಎಂದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಉಪನ್ಯಾಸ ನೀಡಿದರು. ಅತಿಥಿಗಳಾಗಿ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ತಾಲೂಕಾ ವೈದ್ಯಾಧಿಕಾರಿ ಡಾ.ಸುಭಾಸ ದಾಯಗೊಂಡ, ಡಾ. ಶ್ರೀಕಾಂತ ಕಾಟೇವಾಲೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ರಮೇಶ ಹಾವರಡ್ಡಿ, ಪುರಸಭೆ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ, ಕವಿತಾ ಶರಸೂರಿ, ಪೂಜಾ ಖರಾಟೆ, ವಾಣಿ ಹತ್ತಿ, ಮಹಾದೇವಪ್ಪ ಅಣ್ಣಿಗೇರಿ, ಕ್ಷೇತ್ರ ಪ್ರಚಾರಕರಾದ ಜಿ.ತುಕಾರಾಮಗೌಡ ಹಾಗೂ ಶಿರಸ್ತೇದಾರ ಮನಿಯಾರ, ಮುರುಳೀಧರ ಕಾರಭಾರಿ, ಕ್ಷೇತ್ರ ಪ್ರಚಾರಕರಾದ ಜಿ.ತುಕಾರಾಮಗೌಡ, ಕಾರ್ಯಕ್ರಮ ಸಂಯೋಜಕ ಮುರುಳೀಧರ ಕಾರಭಾರಿ, ಎಡಿಸಿಡಿಪಿಓ ಅನ್ನಪೂರ್ಣ ಹಳ್ಳಿಗುಡಿ ಮುಂತಾದವರಿದ್ದರು.
ಕರ್ನಾಟಕಕ್ಕೆ ಕೇಂದ್ರದ ಅನುದಾನದಲ್ಲಿ ಗಣನೀಯ ಹೆಚ್ಚಳವಾಗಿರುವದಾಗಿ ವಾರ್ತಾ ಇಲಾಖೆ ಮಾಹಿತಿ ನೀಡಿದೆ. 2014-24ರಲ್ಲಿ ತೆರಿಗೆ ಹಂಚಿಕೆಯಾಗಿದ್ದು 2,95,818 ಕೋಟಿ ರೂಗಳು. ಭಾರತ ಸರಕಾರದಿಂದ ಬಂದ ಅನುದಾನ 2,36,955 ಕೋಟಿ ರೂಗಳನ್ನು ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ಈ ಭಾಗದಲ್ಲಿ ಐಐಟಿ, ಸ್ಮಾರ್ಟ್ ಸಿಟಿಯಾಗಿ 7 ನಗರಗಳನ್ನು ಆಯ್ಕೆ ಮಾಡಿರುವದು ಸೇರಿದಂತೆ ನೂರಾರು ಯೋಜನೆಗಳು ಕೇಂದ್ರ ಸರಕಾರದ ಕೊಡುಗೆಯಾಗಿದೆ ಎಂದು ಡಾ. ಚಂದ್ರು ಲಮಾಣಿ ತಿಳಿಸಿದರು.