ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚಿನ ದಿನಗಳಲ್ಲಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕರ್ತವ್ಯದ ಒತ್ತಡಗಳ ಮಧ್ಯೆಯೂ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಒತ್ತಡಗಳ ನಡುವೆಯೇ ತಮ್ಮ ಕರ್ತವ್ಯದ ಜೊತೆಗೆ ಕಾರ್ಟೂನ್‌ಗಳನ್ನು ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಶಿರಹಟ್ಟಿ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ.
ತಮ್ಮ ಕರ್ತವ್ಯದ ಬಿಡುವಿನ ವೇಳೆ ನಂದಾ ಹಣಬರಟ್ಟಿ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕೆ ವಿಶೇಷ ಕಾರ್ಟೂನ್‌ಗಳನ್ನು ರಚಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ, ಅಧಿಕಾರಿಗಳ ಗ್ರೂಪ್‌ಗಳ ಮೂಲಕ, ಹೊಸದಾಗಿ ಸೇರ್ಪಡೆಗೊಳ್ಳುವ ಮತದಾರರಲ್ಲಿ, ವಿಶೇಷವಾಗಿ ಎಸ್‌ಸಿ/ಎಸ್‌ಟಿ ಕಾಲೋನಿಗಳಿಗೆ ತೆರಳಿ ಮತದಾರರ ಮತ್ತು ಮತದಾನದ ಕುರಿತು ವಿಶೇಷ ಜಾಗೃತಿಯನ್ನು ಮೂಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.
ಚಿತ್ರಕಲೆಯು ಅವರ ಹವ್ಯಾಸವಾಗಿದ್ದರಿಂದ ಹಾಗೂ ಮತದಾರರ ನೋಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವದರಿಂದ ಮತದಾನದ ಪ್ರಮಾಣ ಕಡಿಮೆ ಇರುವಂತಹ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಸಾರ್ವಜನಿಕರೊಂದಿಗೆ ತಾವೇ ಪರಿಶೀಲನೆ ನಡೆಸಿ ಅವರಲ್ಲಿ ಜಾಗೃತಿಯನ್ನು ಮೂಡಿಸುವುದಕ್ಕೆ ತಾವೇ ಚಿತ್ರಿಸಿದ ಕಾರ್ಟೂನ್‌ಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದು, ಇನ್ನೂ ಹೆಚ್ಚೆಚ್ಚು ಚಿತ್ರ ಬಿಡಿಸಿ ಅವುಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುವಂತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹಾಗೂ ಶಿರಹಟ್ಟಿ ಮತಕ್ಷೇತ್ರ ಮತದಾರರ ನೋಂದಣಾಧಿಕಾರಿ ನಂದಾ ಹಣಬರಟ್ಟಿ, ಚಿತ್ರಕಲೆ ನನ್ನ ಹವ್ಯಾಸವಾಗಿದ್ದು, ಮತದಾನದ ಮತ್ತು ಮತದಾರರ ಮಹತ್ವ ಕುರಿತು ವಿಶೇಷ ಕಾರ್ಟೂನ್‌ಗಳನ್ನು ರಚಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಡಿಮೆ ಮತದಾನ ಪ್ರಮಾಣ ಇರುವ ಸ್ಥಳಗಳಲ್ಲಿ, ಹೊಸದಾಗಿ ಸೇರ್ಪಡೆಯಾಗುವ ಮತದಾರರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಮತದಾನದ ಪ್ರಮಾಣ ಹೆಚ್ಚಳ ಮಾಡುವುದು ಇದರ ಉದ್ದೇಶವಾಗಿದೆ ಎಂದರು.



