ಮೂವರು ಆರೋಪಿಗಳ ಹೆಡಮುರಿ ಕಟ್ಟಿದ ಗದಗಿನ ಕುವರ….
ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ
ಆಯನೂರಿನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಜೂನ್ 4ರ ರಾತ್ರಿ ಕ್ಯಾಶಿಯರ್ ಸಚಿನ್ ಎದೆಗೆ ಚಾಕು ಚುಚ್ಚಿ ಹತ್ಯೆ ಮಾಡಲಾಗಿತ್ತು. ಮದ್ಯ ಸೇವನೆ ಮಾಡುತ್ತಿದ್ದ ಮೂವರಿಗೆ, ಬಾರ್ ಬಂದ್ ಮಾಡುವ ಸಮಯವಾಗಿದೆ ಹೊರಡಿ ಎಂದಿದ್ದಕ್ಕೆ ಜಗಳ ತೆಗೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳ ಎದುರಲ್ಲೇ ಈ ಘಟನೆ ಸಂಭವಿಸಿತ್ತು. ಆರೋಪಿಗಳ ಪತ್ತೆ ಕಾರ್ಯಾಚರಣೆಗಿಳಿದ ಗದಗ ಜಿಲ್ಲೆಯ ಅಧಿಕಾರಿ ಪಿಎಸ್ಐ ರಾಜು ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ಸಚಿನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಅಶೋಕ್ ಮತ್ತು ನಿರಂಜನ್ ಸೆರೆಸಿಕ್ಕಿದ್ದರೂ, ಪ್ರಮುಖ ಆರೋಪಿ ಸತೀಶ್ ಘಟನೆಯ ಬಳಿಕ ತಲೆಮರೆಸಿಕೊಂಡು ಸಮೀಪದ ಕಾಡಿನಲ್ಲಿ ಅವಿತುಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿದ್ದ.
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್ ತಲೆಮರೆಸಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಗದಗಿನ ಹೆಮ್ಮೆಯ ಅಧಿಕಾರಿ, ಪಿಎಸ್ಐ ರಾಜು ರೆಡ್ಡಿ ನೇತೃತ್ವದಲ್ಲಿ, ಸಿಬ್ಬಂದಿ ಶಿವರಾಜ್ ಮತ್ತು ಪ್ರವೀಣ್ ಆರೋಪಿಯನ್ನು ಬಂಧಿಸಲು ಕಾಯಾಚರಣೆಗಿಳಿದಿದ್ದರು.
ಈ ವೇಳೆ ಪೊಲೀಸ್ ಸಿಬ್ಬಂದಿ ಶಿವರಾಜ್ ಮತ್ತು ಪ್ರವೀಣ್ ಮೇಲೆ ಸತೀಶ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರನ್ನೂ ತಳ್ಳಿ ಪಿಎಸ್‌ಐ ರಾಜು ರೆಡ್ಡಿ ಮೇಲೆ ಚಾಕುವಿನಿಂದ ಹಲ್ಲೆಗೆ ನಡೆಸಲು ಮುಂದಾಗಿದ್ದ.
ಈ ವೇಳೆ ಪಿಎಸ್‌ಐ ರಾಜು ರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆಗಲೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆರೋಪಿ ಸತೀಶ್ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿರುವ ವಿಚಾರ ತಿಳಿಯುತ್ತಿದ್ದಂತೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಪುಟಗಾಂವ ಬಡ್ನಿ ಗ್ರಾಮದ ರಾಜು ರೆಡ್ಡಿ, ಈ ಹಿಂದೆ ಬೆಟಗೇರಿ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದರು.
ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಇವರ ಪತ್ತೆಗೆ ಮೂರು ತಂಡಗಳನ್ನು ರಚಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್ ತಲೆಮರೆಸಿಕೊಂಡಿದ್ದ. ಈಗ ನಮ್ಮ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳು ಸಿಬ್ಬಂದಿಗಳೊಂದಿಗೆ ಮಾತನಾಡಿ, ಆರೋಗ್ಯ ವಿಚಾರಿಸಿದ್ದೇನೆ ಮತ್ತು ವೈದ್ಯರನ್ನೂ ಸಂಪರ್ಕಿಸಿ, ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದ್ದೇನೆ.
-ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ.