ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ 10 ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಬಗ್ಗೆ ಮಂಗಳವಾರ ಶಿರಹಟ್ಟಿಯಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಪ್ರಸ್ತಾಪಿಸಿರುವುದಕ್ಕೆ ಗ್ರಾ.ಪಂ ಸದಸ್ಯ ಪದ್ಮರಾಜ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.
ಒಡೆಯರ ಮಲ್ಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ 2 ಎಕರೆ ಭೂಮಿಯನ್ನು ನೀಡಲು ಗ್ರಾ.ಪಂನಿಂದ ಠರಾಯಿಸಲಾಗಿದೆ. ಲಕ್ಷ್ಮೇಶ್ವರ ತಾಲೂಕಾ ಕೇಂದ್ರವಾಗಿದೆಯಲ್ಲದೇ ನೆರೆಯ ಸವಣೂರ, ಶಿಗ್ಗಾಂವ, ಶಿರಹಟ್ಟಿ, ಕುಂದಗೋಳ ತಾಲೂಕಿನ ಜನರಿಗೆ ಕೇಂದ್ರ ಸ್ಥಳವಾಗಿದೆ. ಆಯುಷ್ ಆಸ್ಪತ್ರೆ ನಿರ್ಮಾಣವಾದರೆ ಈ ಎಲ್ಲ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಅನಕೂಲವಾಗಲಿದೆ. ಈ ಬಗ್ಗೆ ಈ ವರ್ಷ ಮಾರ್ಚ್ನಲ್ಲಿ ಕೆಪಿಪಿಸಿ ಸದಸ್ಯ, ಕಾಂಗ್ರೆಸ್ ಯುವ ನಾಯಕರಾದ ಆನಂದಸ್ವಾಮಿ ಗಡ್ಡದೇವರಮಠ ಆಯುಷ್ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಸಚಿವರ ಗಮನ ಸೆಳೆದಿದ್ದರು ಎಂದು ಅವರು ಸ್ಮರಿಸಿದ್ದಾರೆ.