ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಬಿ.ಜಿ. ಅಣ್ಣಿಗೇರಿ ಗುರುಗಳ ನಿಸ್ವಾರ್ಥ ಸೇವೆ, ಪ್ರಾಮಾಣಿಕತೆಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಗದಗ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಹೇಳಿದರು.
ಪ್ರತಿಷ್ಠಾನದ ವತಿಯಿಂದ ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಬಹಳ ಮುಖ್ಯವಾಗಿದ್ದು, ಅಣ್ಣಿಗೇರಿ ಗುರುಗಳ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಈ ದಿಸೆಯಲ್ಲಿ ಅವರ ಹೆಸರಿನಲ್ಲಿ ಪ್ರತಿಭಾ ಪ್ರತಿಷ್ಠಾನವನ್ನು ಸ್ಥಾಪಿಸಿ ಗದಗ ಗ್ರಾಮೀಣ ಹಾಗೂ ಶಹರದಲ್ಲಿರುವ ಸರಕಾರಿ ಶಾಲೆ ಹಾಗೂ ವಸತಿ ಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗದು ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಡಾ. ಜಿ.ಬಿ. ಬಿಡನಾಳ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಮಯಕ್ಕೆ ಹೆಚ್ಚು ಮಹತ್ವನ್ನು ನೀಡಬೇಕು. ದೈರ್ಯದಿಂದ ಪ್ರತಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಗುರುಗಳ ಮಾರ್ಗದರ್ಶನ ಪಡೆಯಬೇಕು ಎಂದರು.
ಪ್ರಥಮ ಸ್ಥಾನ ಪಡೆದ ಗಾಯತ್ರಿ ವಿಜಯಹಾಳ, ರೋಹಿಣಿ ಮಾಡಲಗೇರಿ, ಶಿವಲೀಲಾ ಅಬ್ಬಿಗೇರಿ, ದೃಷ್ಟಿ ರಾಜಕುಮಾರಿ ಮುಸ್ಕಿನಭಾವಿ, ವಿಜಯಲಕ್ಷ್ಮೀ ರಮೇಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯ ವೈ.ಎಚ್. ತೆಕ್ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಕುಂಬಾರ, ಸುಭಾಸಚಂದ್ರ ಬೆಟದೂರು, ಶಿವಣ್ಣ ಕತ್ತಿ, ಭಾರತಿ ಪಾಟೀಲ, ನೇಹಾ ಸುಧಾರಾಣಿ ಉಪಸ್ಥಿತರಿದ್ದರು. ಎ.ಎಸ್. ಕಳಸದ ಸ್ವಾಗತಿಸಿದರು. ವೈ.ವೈ. ಬೆಟಗೇರಿ ನಿರೂಪಿಸಿದರು. ಶಾರದಾ ಮುಂಡೇವಾಡೆ ವಂದಿಸಿದರು.