HomeGadag Newsಅಣ್ಣಿಗೇರಿ ಆಶ್ರಮಕ್ಕೆ ಆರ್ಥಿಕ ನೆರವು

ಅಣ್ಣಿಗೇರಿ ಆಶ್ರಮಕ್ಕೆ ಆರ್ಥಿಕ ನೆರವು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಕೆಲ ಸಮಯ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಪದಾಧಿಕಾರಿಗಳೊಂದಿಗೆ ಔಪಚಾರಿಕವಾಗಿ ಮಾತನಾಡಿದರು.
ಅಣ್ಣಿಗೇರಿ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಚಿಂತನೆ ಮಾಡುವ ಮೂಲಕ ಅವರ ಬದುಕು ಸುಂದರವಾಗಿ ರೂಪುಗೊಳ್ಳಲು ತಮ್ಮಿಂದಾದ ಎಲ್ಲ ರೀತಿಯ ಸಹಾಯ ಮಾಡಿದ ತ್ಯಾಗ ಜೀವಿ. ಸರಕಾರದ ಯಾವುದೇ ಅನುದಾನವನ್ನು ಬಯಸದೆ ತಮ್ಮ ವೈಯುಕ್ತಿಕ ಹಣವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ. ಗುರುಕುಲ ಆಶ್ರಮದ ಮಾದರಿಯಲ್ಲಿ ನಡೆಸಿದ್ದು ಇತಿಹಾಸ ಎಂದರು.
ಅವರ ತರುವಾಯ ಆಶ್ರಮದಲ್ಲಿ ಅವರ ಶಿಷ್ಯರು ಮಕ್ಕಳಿಗೆ ಉಚಿತವಾಗಿ ಟ್ಯೂಶನ್ ಹೇಳಿ ತಮ್ಮ ಗುರುವಿಗೆ ನಮನ ಸಲ್ಲಿಸುವ ಹಾಗೂ ಆ ಮೂಲಕ ಆತ್ಮಸಂತೃಪ್ತಿಯನ್ನು ಕಾಣುವ ಕಾಯಕದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿರುವದು ನೀಜಕ್ಕೂ ಶ್ಲಾಘನೀಯ ಎಂದರು.
ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯಯೋಜನೆಗಳನ್ನು ತಿಳಿದುಕೊಂಡ ಸಂಸದ ಬೊಮ್ಮಾಯಿ ಅವರು ತಾವೂ ಈ ಕಾರ್ಯಕ್ಕೆ ತಮ್ಮ ತಂದೆಯ ಹೆಸರಿನಲ್ಲಿ ವೈಯುಕ್ತಿಕವಾಗಿ ನೆರವು ನೀಡುವದಾಗಿ ಹೇಳಿದರಲ್ಲದೆ, ಅಣ್ಣಿಗೇರಿ ಗುರುಗಳ ಆಶ್ರಮದ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ ಸಹಾಯ ಮಾಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಶಿವಕುಮಾರ ಪಾಟೀಲ, ಶಿವಾನಂದ ಕತ್ತಿ, ಡಾ. ಎಸ್.ಬಿ. ಶೆಟ್ಟರ, ಬಸವರಾಜ ಬಿಂಗಿ, ಸಿದ್ದಣ್ಣ ಕವಲೂರ, ರವಿ ದಂಡಿನ, ತೋಂಟೇಶ ವೀರಲಿಂಗಯ್ಯನಮಠ, ಶಂಕ್ರಪ್ಪ ಅಣ್ಣಿಗೇರಿ, ಡಾ. ಎಸ್.ಡಿ. ಯರಗೇರಿ, ಸುಭಾಶ ಬೆಟದೂರ, ಅನಿಲ ಅಬ್ಬಿಗೇರಿ, ಆಂಜನೇಯ ಕಟಗಿ, ಎಂ.ಬಿ. ಪಾಟೀಲ, ರಫೀಕ್ ಅಬ್ಬಿಗೇರಿ, ಎಂ.ಎಸ್. ಚಿನ್ನೂರ, ಆಶಾ ಶೆಟ್ಟರ ಮುಂತಾದವರಿದ್ದರು.
ಪುಣ್ಯಸ್ಮರಣೆ-ವಾರ್ಷಿಕ ಸಭೆ
ಶಿಕ್ಷಣ ಪ್ರೇಮಿ, ತ್ಯಾಗ ಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಗದಗ ಸೆ. 5ರಂದು ಮುಂಜಾನೆ 10.30ಕ್ಕೆ ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ 5ನೇ ಪುಣ್ಯಸ್ಮರಣೆ ಸಮಾರಂಭ ಮತ್ತು ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಏರ್ಪಡಿಸಿದೆ.
ಸಾನ್ನಿಧ್ಯವನ್ನು ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ನರಗುಂದ ಶಾಸಕ ಸಿ.ಸಿ. ಪಾಟೀಲ, ಗದಗ ಮಾಜಿ ಶಾಸಕ ಡಿ.ಆರ್. ಪಾಟೀಲ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಆಗಮಿಸುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಶಿವಾನಂದ ಕತ್ತಿ ತಿಳಿಸಿದ್ದಾರೆ.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!