ಬೆಂಗಳೂರು: ಬಿ.ಆರ್.ಪಾಟೀಲ್ ಹೇಳಿರೋದು ನೂರಕ್ಕೆ ನೂರು ಸತ್ಯ. ಏನೇ ಆಗಬೇಕಾದ್ರೆ ಹಣ ಕೊಟ್ಟು ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಲಂಚದ ಬಗ್ಗೆ ಬಿ.ಆರ್.ಪಾಟೀಲ್ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಅವರು,
ಬಡವರು ಹಣ ಕೊಟ್ಟು ಮನೆ ತೆಗೆದುಕೊಳ್ಳುವ ದುಸ್ಥಿತಿ ನಿರ್ಮಾಣ ಆಗಿದೆ. ಇದನ್ನು ನಾನು ಹೇಳುತ್ತಿಲ್ಲ. ಬಿ.ಆರ್.ಪಾಟೀಲ್ ಅವರೇ ಹೇಳಿದ್ದಾರೆ. ಸರ್ಕಾರ ಈಗಲಾದರೂ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನೂ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಕೆ, ಡೆಲ್ಲಿಯಿಂದ ಟಿಕೆಟ್ ತರುತ್ತೇನೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕುಮಾರಸ್ವಾಮಿ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ದೇವೇಗೌಡರಿಗೆ ಮೋದಿ ಅವರ ಮೇಲೆ ನಂಬಿಕೆ ಇದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ಸರ್ಕಾರ ಇಳಿಸಿ ಬಿಜೆಪಿ ಸರ್ಕಾರ ತರುತ್ತೇವೆ ಎಂದು ಹೇಳಿದರು.