ಹಿರಿಯ ನಟಿ ಬಿ. ಸರೋಜಾ ದೇವಿ ತಮ್ಮ 87ನೇ ವಯಸ್ಸಿಗೆ ನಿಧನರಾಗಿದ್ದಾರೆ. 60 ವರ್ಷಗಳ ಕಾಲ ಚಿತ್ರರಂಗದಲ್ಲಿ ನಟಿಸಿದ್ದ ಸರೋಜಾ ದೇವಿ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೇರು ನಟಿ ಎನಿಸಿಕೊಂಡಿದ್ರು ಸರೋಜಾ ದೇವಿ ತಮ್ಮ ತಾಯಿಗೆ ಕೊಟ್ಟಿದ್ದ ಮಾತನ್ನು ಕೊನೆಯ ಉಸಿರು ಇರುವವರೆಗೂ ಉಳಿಸಿಕೊಂಡಿದ್ದರು.
ಸರೋಜ ದೇವಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ತಮ್ಮ 17ನೇ ವಯಸ್ಸಿಗೆ. 1955ರಲ್ಲಿ ತೆರೆಗೆ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಬಣ್ಣದ ಬದುಕಿಗೆ ಎಂಟ್ರಿಕೊಟ್ಟರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿ ಕೇವಲ 17ನೇ ವಯಸ್ಸಿಗೆ ಮೊದಲ ಮಹಿಳಾ ಸೂಪರ್ಸ್ಟಾರ್ ಎನಿಸಿಕೊಂಡರು.
‘ಪಾಂಡುರಂಗ ಮಹಾತ್ಯಂ’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು. ‘ನಾಡೋಡಿ ಮನ್ನನ್ ’ ಚಿತ್ರದ ಮೂಲಕ ತಮಿಳಿನಲ್ಲಿ ಬೇಡಿಕೆಯ ನಟಿಯಾದರು. ಅವರು 60,70 ಹಾಗೂ 80ರ ದಶಕದಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಗ್ರ ಸ್ಥಾನ ಪಡೆದರು. ಸರೋಜಾ ದೇವಿ ಅವರಿಗೆ 1969ರಲ್ಲಿ ಪದ್ಮ ಶ್ರೀ, 1992ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಕಡೆಯಿಂದ ಅವರಿಗೆ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಗೆ ಸರೋಜ ದೇವಿ ಭಾಜನರಾಗಿದ್ದಾರೆ.
ಸರೋಜಾ ದೇವಿ ಅವರ ಮೂಲ ಹೆಸರು ರಾಧಾದೇವಿ. ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜ ದೇವಿ ಹುಟ್ಟಿದರು. ಸರೋಜ ದೇವಿ ಅವರ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಸರೋಜ ದೇವಿ ಚಿತ್ರರಂಗಕ್ಕೆ ಎಂಟ್ರಿಕೊಡುವ ಮುನ್ನ ಅವರ ತಾಯಿ ಕೆಲವೊಂದು ಕಂಡಿಷನ್ ಗಳನ್ನು ಹಾಕಿದ್ದರಂತೆ. ಈಜುಡುಗೆ ಹಾಗೂ ತೋಳಿಲ್ಲದ ಬ್ಲೌಸ್ನ ಯಾವಾಗಲೂ ಹಾಕಬಾರದು ಎಂದು ತಾಯಿ ಸ್ಟ್ರಿಕ್ಟ್ ಆಗಿ ಹೇಳಿದ್ದರು. ಇದನ್ನು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದಿದ್ದರು. ಅದೇ ಕಾರಣಕ್ಕೆ ಸರೋಜಾ ದೇವಿ ಯಾವುದೇ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರಲಿಲ್ಲ.