2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ಹೊರಬಿದ್ದ ನಂತರ, ದೊಡ್ಡ ತಂಡಗಳ ವಿರುದ್ಧದ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಪ್ರದರ್ಶನ ನೀಡಲು ಅಸಮರ್ಥರಾಗಿದ್ದಕ್ಕಾಗಿ ಡ್ಯಾನಿಶ್ ಕನೇರಿಯಾ ಬಾಬರ್ ಅಜಮ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡ್ಯಾನಿಶ್ ಕನೇರಿಯಾ, ಬಾಬರ್ ಆಝಂ ನ್ಯೂಝಿಲೆಂಡ್ ವಿರುದ್ಧ ವಿಫಲರಾಗಿದ್ದರು. ಅದು ಸಹ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ. ಇದೀಗ ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಅಂದರೆ ಆತ ಕೇವಲ ದುರ್ಬಲ ತಂಡಗಳ ವಿರುದ್ಧ ಮಾತ್ರ ರನ್ಗಳಿಸುತ್ತಾರೆ ಎಂಬುದು ಜಗಜ್ಜಾಹೀರಾಗಿದೆ ಎಂದಿದ್ದಾರೆ.
ಬಾಬರ್ ಆಝಂ ಇಷ್ಟು ದಿನ ರನ್ ಗಳಿಸಿಲ್ಲ. ಆತನ ರನ್ ಗಳಿಸುವುದೇ ಝಿಂಬಾಬ್ವೆಯಂತಹ ಸಣ್ಣ ಪುಟ್ಟ ತಂಡಗಳ ವಿರುದ್ಧ ಮಾತ್ರ. ಬಲಿಷ್ಠ ಟೀಮ್ಗಳ ವಿರುದ್ಧ ಆತನಿಗೆ ರನ್ ಗಳಿಸಬೇಕೆಂಬ ಉದ್ದೇಶವೇ ಇಲ್ಲ. ನನ್ನ ಪ್ರಕಾರ ಬಾಬರ್ ಆಝಂ ಝಿಂಬಾಬ್ವೆ ವಿರುದ್ಧದ ಕಿಂಗ್ ಎಂದು ಡ್ಯಾನಿಶ್ ಕನೇರಿಯಾ ವ್ಯಂಗ್ಯವಾಡಿದ್ದಾರೆ.
ಬಾಬರ್ ಆಝಂ ಅವರನ್ನು ಪಾಕಿಸ್ತಾನ್ ಮಾಧ್ಯಮಗಳು ಕಿಂಗ್ ಎಂದು ಬಿಂಬಿಸುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಐಸಿಸಿಯಂತಹ ಮಹತ್ವದ ಟೂರ್ನಿಗಳಲ್ಲಿ ಬಾಬರ್ ಆಝಂ ಕಡೆಯಿಂದ ಉತ್ತಮ ಇನಿಂಗ್ಸ್ ಮೂಡಿ ಬರುತ್ತಿಲ್ಲ. ಹೀಗಾಗಿಯೇ ಇದೀಗ ಅಸಲಿ ಕಿಂಗ್ ಯಾರೆಂಬುದು ಬಹಿರಂಗವಾಗಿದೆ ಎಂಬ ಮಾತುಗಳು ಪಾಕಿಸ್ತಾನದಲ್ಲೇ ಕೇಳಿ ಬರುತ್ತಿದೆ.
ಇತ್ತ ಮಾಧ್ಯಮಗಳ ಹೈಪ್ನೊಂದಿಗೆ ಕಿಂಗ್ ಎಂದು ಕರೆಸಿಕೊಂಡಿದ್ದ ಬಾಬರ್ ಆಝಂ ಝಿಂಬಾಬ್ವೆ ವಿರುದ್ಧದ ಮಾತ್ರ ರನ್ಗಳಿಸುತ್ತಾರೆ. ಬಲಿಷ್ಠ ತಂಡಗಳ ವಿರುದ್ಧದ ರನ್ಗಳಿಸಲು ಪರದಾಡುತ್ತಾನೆ. ಅದೇಗೆ ಆತನನ್ನು ಕಿಂಗ್ ಎಂದು ವರ್ಣಿಸಲಾಗುತ್ತಿದೆ ಎಂದು ಡ್ಯಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.