ವಿಜಯಸಾಕ್ಷಿ ಸುದ್ದಿ, ರೋಣ: ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ 200 ಕೋಟಿ ರೂಗಳ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ಮುಖಂಡರು, ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕಾ ಕ್ರೀಡಾಂಗಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ಕಾರ್ಯಕ್ರಮಕ್ಕೆ 50 ಸಾವಿರ ಜನ ಸೇರುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಈಗಾಗಲೇ 30 ಸಾವಿರ ಆಸನ ಸಾಮರ್ಥ್ಯದ ಬೃಹತ್ ಪೆಂಡಾಲ್‌ನ್ನು ಹಾಕಲಾಗುತ್ತಿದೆ. ಮಹಿಳೆಯರಿಗೆ 12 ಮತ್ತು ಪುರುಷರಿಗೆ 18 ಊಟದ ಕೌಂಟರ್‌ಗಳನ್ನು ನಿರ್ಮಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಪಾರ ಪ್ರಮಾಣದಲ್ಲಿ ಜನ ಸೇರುವ ಕಾರಣ, ಸುಗಮ ಸಂಚಾರಕ್ಕೆ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದಾಗ, ಪುರಸಭಾ ಸದಸ್ಯ ಸಂಗನಗೌಡ ಪಾಟೀಲ ಪ್ರತಿಕ್ರಿಯಿಸಿ, ನಾಲ್ಕು ಎಕರೆ ಜಮೀನು ಸೇರಿದಂತೆ ಎಂಆರ್‌ಬಿಸಿ ಆವರಣ, ವಿ.ಎಫ್. ಪಾಟೀಲ ಶಾಲಾ ಆವರಣ, ಎಂಆರ್‌ಬಿಸಿ ಕಾಲೋನಿಗಳಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅನ್ಯ ಮಾರ್ಗಗಳಿಂದ ಬರುವ ವಾಹನಗಳಿಗೆ ಅದೇ ಮಾರ್ಗದಲ್ಲಿ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಸರಕಾರದ ವಿವಿಧ ಯೋಜನೆಗಳನ್ನು ಪ್ರಚುರಪಡಿಸಲು 20 ಮಳಿಗೆಗಳನ್ನು ಹಾಕಬೇಕು. ಧ್ವನಿವರ್ಧದ ಮೂಲಕ ಜನರಿಗೆ ಯೋಜನೆಗಳ ಮಹತ್ವವನ್ನು ತಿಳಿಸಬೇಕು. ಅಲ್ಲದೆ ಎಲ್‌ಇಡಿ ಪರದೆ ಮೂಲಕವೂ ಯೋಜನೆಗಳ ಬಗ್ಗೆ ಮಾಹಿತಿ ನಿಡಬೇಕು ಎಂದರು. ತಹಸೀಲ್ದಾರ್ ನಾಗರಾಜ ಕೆ ಪ್ರತಿಕ್ರಿಯಿಸಿ, ಸಮಾವೇಶದಲ್ಲಿ ವೇದಿಕೆ ಹಿಂಬಾಗದ ಎಲ್‌ಇಡಿ ಪರದೆಯನ್ನು ಹೊರತುಪಡಿಸಿ ಇನ್ನೂ ನಾಲ್ಕು ಕಡೆಗಳಲ್ಲಿ ಎಲ್‌ಇಡಿ ಪರದೆಯನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಪಂ ಸಿಇಒ ಭರತ್ ಎಸ್, ಡಿವಾಯ್‌ಎಸ್ಪಿ ಪ್ರಭುಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಪ್ರಕಾಶ ಬಣಕಾರ, ಆಹಾರ ಸರಬರಾಜು ವಿಭಾಗದ ಸುವರ್ಣಾ ಜುಮ್ಮನಕಟ್ಟಿ, ವೀರಣ್ಣ ಶೆಟ್ಟರ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಅಪ್ಪು ಗಿರಡ್ಡಿ, ಸಂಗು ನವಲಗುಂದ, ಅಭಿಷೇಕ ನವಲಗುಂದ, ಮಲ್ಲಯ್ಯಜ್ಜ ಮಹಾಪುರುಷಮಠ, ಯಲ್ಲಪ್ಪ ಕಿರೇಸೂರ, ಮಲ್ಲು ರಾಯನಗೌಡ್ರ ಸೇರಿದಂತೆ ರೋಣ, ಗಜೇಂದ್ರಗಡ ತಹಸೀಲ್ದಾರ್ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿರುವ ಪುರಸಭಾ ಸದಸ್ಯ ಸಂಗನಗೌಡ ಪಾಟೀಲ ಕ್ರೀಡಾಂಗಣ ಹಾಗೂ ಜನರು ಆಗಮಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಸಮಗ್ರ ಮಾಹಿತಿಯನ್ನು ಒದಗಿಸಿದರು. ಅಲ್ಲದೆ, ಯುವ ಪಡೆಯನ್ನು ಕಟ್ಟಿಕೊಂಡು ಎಲ್ಲರ ಜೊತೆಗೆ ಬೆರೆತು ಕೆಲಸ ನಿರ್ವಹಿಸುತ್ತಿರುವ ದೃಶ್ಯ ಕ್ರೀಡಾಂಗಣದಲ್ಲಿ ಕಂಡು ಬಂದಿತು.



