ಬಾಗಲಕೋಟೆ: ಟೋಲ್ ಬಳಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸಂಬಳ ನೀಡಲು ಟೋಲ್ ನಾಕಾದವರು ಪೇಮೆಂಟ್ ಕೊಟ್ಟಿಲ್ಲವೆಂಬ ಕಾರಣದಿಂದ ಲೇಬರ್ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆಯ ಹೊಸೂರು ಬಳಿ ಇರುವ ಬೆಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಬಳಿ ಗುತ್ತಿಗೆದಾರ ವಾರೆಪ್ಪ ಪೂಜಾರ ಎಂಬವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಆರು ತಿಂಗಳಿಂದ ಅವರಿಗೆ ಪೇಮೆಂಟ್ ನೀಡಿರಲಿಲ್ಲ. ಅಲ್ಲದೆ, ಅವರನ್ನು ಗುತ್ತಿಗೆ ಕೆಲಸದಿಂದ ಏಕಾಏಕಿ ತೆಗೆದುಹಾಕಲಾಗಿತ್ತು. ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೆದ್ದಾರಿಯಲ್ಲಿ ನಿಡಗುಂದಿಯಿಂದ ಹುನಗುಂದವರೆಗೆ ಗಾರ್ಡನಿಂಗ್ ನಿರ್ವಹಣೆ,
ಸ್ವಚ್ಛತಾ ಕೆಲಸ ಮತ್ತು ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಕೂಲಿ ಕಾರ್ಮಿಕರ ಮೂಲಕ ವಾರೆಪ್ಪ ಪೂಜಾರ ಮಾಡಿಸುತ್ತಿದ್ದರು. ಆದರೆ, ಟೋಲ್‌ನವರು ಕಳೆದ ಆರು ತಿಂಗಳಿಂದ ಅವರಿಗೆ ಪೇಮೆಂಟ್ ನೀಡಿರಲಿಲ್ಲ ಎಂದು ತಿಳಿದುಬಂದಿದೆ̤ ಪೂಜಾರ ಅವರ ಆತ್ಮಹತ್ಯೆಯಿಂದ ಆಕ್ರೋಶಗೊಂಡಿರುವ ಸ್ಥಳೀಯರು ಟೋಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ ಎಂದು ವರದಿಯಾಗಿದೆ.