ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣಕ್ಕೆ ಡಿ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಕೂಲ್ ಚಂದನಕ್ಕೆ ಆಗಮಿಸುತ್ತಿರುವದರಿಂದ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಮಂಗಳವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಪಟ್ಟಣಕ್ಕೆ ಆಗಮಿಸಿ ಸ್ಥಳದ ವೀಕ್ಷಣೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮ ಡಿ. 13ರಂದು ನಿಗದಿಯಾಗಿದ್ದು, ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಹೆಲಿಕಾಪ್ಟರ್ ಇಳಿಯುವ ಸ್ಥಳ ಮತ್ತು ಮುಖ್ಯಮಂತ್ರಿಗಳು ಭಾಗಿಯಾಗುವ ಕಾರ್ಯಕ್ರಮದ ಸ್ಥಳಗಳನ್ನು ಪರಿಶೀಲಿಸಿದರು. ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಹೆಲಿಪ್ಯಾಡ್ ಸಿದ್ಧಗೊಳ್ಳಲಿದ್ದು, ಅಲ್ಲಿಂದ ಸಿ.ಎಂ ಅವರು ಸ್ಕೂಲ್ ಚಂದನದಲ್ಲಿ ನಡೆಯುವ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಸಂಸ್ಥೆಯ ನಿರ್ದೇಶಕರಾಗಿದ್ದ ದಿ. ಎಚ್.ಸಿ. ರಟಗೇರಿ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸುವರು. ಈ ಹಿನ್ನೆಲೆಯಲ್ಲಿ ಚಂದನ ಶಾಲೆಯಲ್ಲಿ ಬೃಹತ್ ವೇದಿಕೆ, ಪೆಂಡಾಲ್ ಸಿದ್ಧವಾಗುತ್ತಿದೆ. ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಚಂದನ ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಜಿಲ್ಲಾಧಿಕಾರಿಗಳಿಗೆ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ತಹಸೀಲ್ದಾರ ಧನಂಜಯ ಎಂ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀನಾಯಕ್, ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪೂರ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ ಮುಂತಾದವರಿದ್ದರು.



