ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ವರ್ತಕರಿಂದ ನೂತನವಾಗಿ ನಿರ್ಮಾಣಗೊಂಡ ಗಣಪತಿ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶನಿವಾರ ಗಣಪತಿ, ಈಶ್ವರ, ನಂದಿ, ಮಾರುತಿ ಹಾಗೂ ನಾಗದೇವರ ಶಿಲಾ ಮೂರ್ತಿಗಳ ಭವ್ಯ ಮೆರವಣಿಗೆ ಜರುಗಿತು.
ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಆದಯ್ಯ ವೃತ್ತ, ಗದಗ ನಾಕಾ, ಹೊಸ ಬಸ್ ನಿಲ್ದಾಣ, ಶಿಗ್ಲಿ ಕ್ರಾಸ್, ಪುರಸಭೆ, ಬಜಾರ್ ರಸ್ತೆ, ಹಾವಳಿ ಆಂಜನೇಯ ದೇವಸ್ಥಾನ, ವಿದ್ಯಾರಣ್ಯ ವೃತ್ತ, ಪರ್ವತ ಮಲ್ಲಯ್ಯ ದೇವಸ್ಥಾನದ ಮೂಲಕ ಎಪಿಎಂಸಿವರೆಗೆ ಸಾಗಿ ಸಂಪನ್ನಗೊಂಡಿತು. ಮೆರವಣಿಗೆಯ ಆರಂಭದಿAದಲೂ ಮುಕ್ತಿಮಂದಿರ ಶ್ರೀಗಳೇ ಮೂರ್ತಿಗಳನ್ನಿರಿಸಿದ ಎತ್ತಿನ ಬಂಡಿಯನ್ನು ಮುನ್ನಡೆಸಿದರು.
ಈ ವೇಳೆ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್, ಸಂಗಪ್ಪ ಹನುಮಸಾಗರ, ಸಿದ್ದನಗೌಡ ಬಳ್ಳೊಳ್ಳಿ, ಬಸವೇಶ ಮಹಾಂತಶೆಟ್ಟರ, ಸುಭಾಷ ಓದುನವರ, ತೋಂಟೇಶ ಮಾನ್ವಿ, ಕುಬೇರಪ್ಪ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ಎಸ್.ಕೆ. ಕಾಳಪ್ಪನವರ, ಸಂತೋಷ ಬಾಳಿಕಾಯಿ, ಎನ್.ಎಸ್. ಪಾಟೀಲ, ನಿಂಗಪ್ಪ ಬನ್ನಿ, ರಾಜು ಕೊಟಗಿ, ವಿಜಯ ಬೂದಿಹಾಳ, ಸೋಮೇಶ ಉಪನಾಳ, ರಾಘವೇಂದ್ರ ಸದಾವರ್ತಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಉಪಾಧ್ಯಕ್ಷ ಫಿರ್ದೋಷ್ ಆಡೂರ, ರಾಮಣ್ಣ ಗಡದವರ, ನಿಂಗಪ್ಪ ಬನ್ನಿ, ಈರಣ್ಣ ಅಕ್ಕೂರ, ಎಂ.ಆರ್. ಪಾಟೀಲ, ಬಸವರಾಜ ಮಹಾಂತಶೆಟ್ಟರ, ನೀಲಪ್ಪ ಸಂಶಿ ಸೇರಿದಂತೆ ಅನೇಕರಿದ್ದರು.
ಜಿಟಿಜಿಟಿ ಮಳೆಯಲ್ಲಿಯೇ ಮೆರವಣಿಗೆಗೆ ದಕ್ಷಿಣ ಕನ್ನಡದ ಚಂಡಮದ್ದಳೆ, ಬೊಂಬೆ ಕುಣಿತ, ಲಕ್ಷ್ಮೇಶ್ವರದ ಪ್ರಸಿದ್ಧ ಜಾನಪದ ನೃತ್ಯ ಕುದುರೆಕಾರರ ಕುಣಿತ, ನಂದಿಕೋಲು ಕುಣಿತ ಸೇರಿ ಮತ್ತಿತರ ಕಲಾತಂಡಗಳು ಮತ್ತು ಮಹಿಳೆಯರ ಪೂರ್ಣಕುಂಭ ಮೆರವಣಿಗೆಯ ರಂಗು ಹೆಚ್ಚಿಸಿದ್ದವು. ಈ ವೇಳೆ `ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದ್ದವು. ಎತ್ತಿನ ಬಂಡಿಯಲ್ಲಿ ಶೋಭಾಯಮಾನವಾಗಿದ್ದ ದೇವರ ಮೂರ್ತಿಗಳಿಗೆ ಎಲ್ಲರೂ ಭಕ್ತಿಯಿಂದ ನಮಿಸಿದರು.