ಸಂಖ್ಯಾ ಶಾಸ್ತ್ರಜ್ಞ ಎಂದು ತಾವು ಘೋಷಿಸಿಕೊಂಡಿರುವ ಆರ್ಯವರ್ಧನ್ ಗುರೂಜಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂಬ ಡೈಲಾಗ್ ಮೂಲಕ ಫೇಮಸ್ ಆದ ಆರ್ಯವರ್ಧನ್, ಇತ್ತೀಚೆಗೆ ನಟ ಸುದೀಪ್ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಇದೀಗ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಸಮಯದಲ್ಲೇ ಆರ್ಯವರ್ಧನ್ ತಮ್ಮ ಅಸಾಧಾರಣ ಹೇಳಿಕೆಗಳಿಂದ ಗಮನ ಸೆಳೆದಿದ್ದರು. ಕಾರ್ಯಕ್ರಮದೊಳಗೇ ‘ಅನುಪಮಾ ಗೌಡ ಅವರನ್ನು ಉಳಿಸಲು ನೀವು ಪ್ರಯತ್ನಿಸುತ್ತಿದ್ದೀರಿ’ ಎಂದು ಸುದೀಪ್ ಎದುರೇ ಆರೋಪ ಮಾಡಿದ್ದರಿಂದ, ಆಗ ಸುದೀಪ್ ಕಠಿಣವಾಗಿ ಪ್ರತಿಕ್ರಿಯಿಸಿದ್ದರು.
ಬಿಗ್ ಬಾಸ್‌ನಿಂದ ಹೊರಬಂದ ಬಳಿಕವೂ ಆರ್ಯವರ್ಧನ್ ಅನೇಕ ಸಂದರ್ಶನಗಳಲ್ಲಿ ಶೋ ಹಾಗೂ ಸುದೀಪ್ ವಿರುದ್ಧ ಮಾತಿನ ಚಾಟಿ ಬೀಸಿದ್ದರು. ಇದಕ್ಕೆ ಸುದೀಪ್ ಪರೋಕ್ಷವಾಗಿ ವೇದಿಕೆಗಳಿಂದ ಉತ್ತರ ನೀಡಿದ್ದರು.
ಇತ್ತೀಚೆಗೆ ಆರ್ಯವರ್ಧನ್ ಹೇಳಿದ್ದ ‘ದರ್ಶನ್ ಹೋದ್ಮೇಲೆ ಸುದೀಪ್ ಎಗರಾಡುತ್ತಿದ್ದಾರೆ’ ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಯಿತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸುದೀಪ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ದುನಿಯಾ ವಿಜಯ್ ಅವರ ವಾರ್ನಿಂಗ್ ವಿಡಿಯೋವನ್ನು ಎಡಿಟ್ ಮಾಡಿ ಆರ್ಯವರ್ಧನ್‌ಗೆ ಎಚ್ಚರಿಕೆಯಾಗಿ ಹರಿಬಿಡಲಾಗಿತ್ತು.
ಈ ಹಿನ್ನೆಲೆ, ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಯಾಚಿಸಿರುವ ಆರ್ಯವರ್ಧನ್, “ಸುದೀಪ್ ಅವರಿಗೆ ನನ್ನ ನಮಸ್ಕಾರ. ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಮಾತನಾಡುವ ಭರದಲ್ಲಿ ಕೆಲ ಮಾತುಗಳು ಹೊರಬಂದಿವೆ. ನೋವಾಗಿದ್ದರೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದಾರೆ.
ಮುಂದುವರೆದು, “ಸುದೀಪ್ ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಸಾರಿ, ಸಾರಿ, ಸಾರಿ. ದೇವರು ಅವರನ್ನು ಹಾಗೂ ಅವರ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. ಅವರ ಅಭಿಮಾನಿಗಳಿಗೆಲ್ಲಾ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ.



