ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ದೇವಸ್ಥಾನದ ದ್ವಾರ ಬಾಗಲಿನ ಕಲ್ಲು ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಸುರೇಖಾ ಕಂಬಾರ (44) ಸಾವನ್ನಪ್ಪಿದ ದುರ್ಧೈವಿಯಾಗಿದ್ದು, ದ್ವಾರ ಬಾಗಲಿನ ಕಲ್ಲು ತಲೆ ಮೇಲೆ ಬಿದ್ದು ತರಕಾರಿ ಮಾರುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಪ್ರತಿ ಸೋಮವಾರ ಆಲಗೂರು ಗ್ರಾಮದಲ್ಲಿ ಸಂತೆ ನಡೆಯುತ್ತದೆ.
ದೇವಾಲಯದ ದ್ವಾರ ಬಾಗಿಲನಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಕೂತಿದ್ದರು. ಅದರಂತೆ ಇಂದೂ ಸಹ ಅದೇ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಮತ್ತೊಂದೆಡೆ ದೇವಾಲಯದ ಬಳಿಯಿದ್ದ ಮಂಗಗಳು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದವು. ಈ ವೇಳೆ ದ್ವಾರ ಬಾಗಿಲಿಗೆ ಮಂಗವೊಂದು ಜಿಗಿದಿದೆ.
ಮಂಗ ಜಿಗಿಯುತ್ತಿದ್ದಂತೆಯೇ ದ್ವಾರಬಾಗಿಲಿನಲ್ಲಿ ಸಿಮೆಂಟ್ ಕಲ್ಲು ಸುರೇಖಾ ತಲೆ ಮೇಲೆ ಬಿದ್ದಿದೆ. ಪರಿಣಾಮ ಸುರೇಖಾ ನೆಲಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಖಾ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.ಜಮಖಂಡಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.