ಬೆಂಗಳೂರು: ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂಬ ಸರ್ಕಾರದ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಕಾನೂನು ಮತ್ತು ನಿಯಮಗಳನ್ನು ಮೀರಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಕರ್ನಾಟಕದಲ್ಲಿ ಹೆಂಡ (ಸೇಂದಿ) ಇಳಿಸುವ ಕುಲಕಸುಬು ಇದ್ದುದರಿಂದ ಅದನ್ನು ಅವಲಂಬಿಸಿದ್ದವರಿಗಾಗಿ ಕೆಲವು ಪ್ರದೇಶಗಳನ್ನು ಈಚಲುವನ ಅಥವಾ ಸೇಂದಿವನ ಎಂದು ಕಾಯ್ದಿರಿಸಲಾಗಿತ್ತು ಎಂದು ವಿವರಿಸಿದರು.
ನಂತರ ಈ ವೃತ್ತಿಯನ್ನು ನಿಷೇಧಿಸಿದ ಬಳಿಕ ಕೆಲವರು ಆ ಜಮೀನಿನಲ್ಲಿ ಕೃಷಿ ಮಾಡತೊಡಗಿದರು. ಇನ್ನೂ ಕೆಲವು ಪ್ರದೇಶಗಳನ್ನು ಸರ್ಕಾರವೇ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದೆ. ಆದರೆ ಪ್ರಸ್ತುತ ಅದೇ ಜಮೀನನ್ನು ಬಗರ್ ಹುಕುಂ ಯೋಜನೆಯಡಿ ಮಂಜೂರು ಮಾಡಲು 2003ರಲ್ಲಿ ಹೊರಡಿಸಿದ ಸರ್ಕಾರಿ ಆದೇಶದ ಕಾರಣ ಕೆಲವು ಕಾನೂನು ತೊಡಕುಗಳು ಎದುರಾಗಿವೆ ಎಂದು ಹೇಳಿದರು.
ಸೇಂದಿವನ ಪ್ರದೇಶವನ್ನು ಬಗರ್ ಹುಕುಂ ಯೋಜನೆಯಡಿ ರೈತರಿಗೆ ಮಂಜೂರು ಮಾಡಬೇಕು ಎಂಬ ಬೇಡಿಕೆ ನಮಗೆ ಅರ್ಥವಾಗಿದೆ. ಈ ಬಗ್ಗೆ ಸಕಾರಾತ್ಮಕ ತೀರ್ಮಾನ ಕೈಗೊಳ್ಳುವ ಉದ್ದೇಶ ಸರ್ಕಾರಕ್ಕಿದೆ ಎಂದು ತಿಳಿಸಿದರು.
ಆದರೆ ಸೇಂದಿವನ ಜಮೀನನ್ನು ಅಬಕಾರಿ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡುವಾಗ 2003ರಲ್ಲಿ ಅಂದಿನ ಸರ್ಕಾರ ರೂಪಿಸಿದ್ದ ಐದು ನಿಯಮಗಳು ಈಗ ಅಡೆತಡೆಗಳಾಗಿ ಪರಿಣಮಿಸಿವೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.



