ಕನ್ನಡಿಗರಿಗೆ ಉದ್ಯೋಗ ಕೊಡಿಸಿ : ಬೇಕ್ರಿ ರಮೇಶ್

0
Bakeri Ramesh is the state president of the Kadamba army
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೇ ಖಾಸಗಿ ಕಂಪನಿಗಳು ದ್ರೋಹ ಮಾಡುತ್ತಿವೆ. ಈ ಕೂಗು ಕೇವಲ ಇಂದು ನಿನ್ನೆಯದಲ್ಲ. ಖಾಸಗಿ ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿದಾಗಿನಿಂದಲೂ ಇದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ಖಂಡಿಸಿ ಆ.5ರಿಂದ 22ರವರೆಗೆ ರಾಜ್ಯಾದ್ಯಂತ ಕದಂಬ ಸೈನ್ಯದಿಂದ ಹೋರಾಟ ಮಾಡಲಾಗುವುದು ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಸ್ಥಳೀಯ ಯುವಕರಿಗೆ ಶೇ 50-80ರಷ್ಟು ಮೀಸಲಾತಿ ಇದೆ. ಆದರೆ, ರಾಜ್ಯದಲ್ಲಿ ಕಾನೂನುಗಳು ಹಲ್ಲು ಕಿತ್ತ ಹಾವಿನಂತಾಗಿವೆ. ಹೋರಾಟ, ಧರಣಿ, ಸತ್ಯಾಗ್ರಹ ನಡೆಯುತ್ತಲೇ ಇವೆ. ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡಿದರೆ ಕನ್ನಡದ ಯುವಕರು ಆರ್ಥಿಕವಾಗಿ ಸಬಲರಾಗುತ್ತಾರೆ. ಖಾಸಗಿ ಕಂಪನಿಗಳಿಗೆ ನಮ್ಮ ಸರ್ಕಾರ ನೆಲ, ಜಲ, ನೀರು, ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿವೆ. ಆದರೆ, ಬೆರಳೆಣಿಕೆ ಕನ್ನಡಿಗರಿಗೆ ಉದ್ಯೋಗ ನೀಡುತ್ತಿವೆ. ಈ ಸರಕಾರ ಕನ್ನಡಿಗರಿಗೆ ಉದ್ಯೋಗ ನೀಡಬೇಕಾದರೆ ಕನ್ನಡಿಗರಿಗೆ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಹಿಂದಿ ಹೇರಿಕೆ ಇತ್ತೀಚಿನ ದಿನಗಳಲ್ಲಿ ವಿಪರಿತವಾಗಿದೆ. ನಮಗೆ ದ್ವಿಭಾಷೆ ನೀತಿ ಬೇಕು. ಆದರೆ, ಹಿಂದಿ ಹೇರಿಕೆ ಭಾಷಾ ಸಾಮ್ರಾಜ್ಯ ಶಾಹಿತ್ವದ ಒಂದು ರೂಪವಾಗಿದೆ. ಭಾಷೆಯ ಬಗ್ಗೆ ಪರಿಸ್ಥಿತಿ ಹೀಗೆ ಮುಂದುವರೆದರೆ ದೇಸೀ ಭಾಷೆಗಳ ಸಾವು ಖಚಿತ. ರಾಜ್ಯದ ಎಲ್ಲ ಕೇಂದ್ರ ಕಛೇರಿಗಳಲ್ಲಿ ಶೇ. 80 ಹಿಂದಿ ಭಾಷಿಗರೇ ತುಂಬಿದ್ದಾರೆ. ಪರೀಕ್ಷೆಗಳಲ್ಲಿಯೂ ಹಿಂದಿ ಹೇರಿಕೆಯಾಗುತ್ತಿರುವುದು ಬೇಸರದ ಸಂಗತಿ. ಪ್ರಾಧಿಕಾರ ಇದ್ದರೂ ಏನೂ ತಿಳಿಯದಂತೆ ಮೌನವಾಗಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಅಬ್ಬಿಗೇರಿಯ ಯಲ್ಲಾಲಿಂಗಸ್ವಾಮಿ ಮಠದ ಬಸವರಾಜ ಶರಣರು, ಕದಂಬ ಸೈನ್ಯದ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ, ಗದಗ ಜಿಲ್ಲಾ ಮುಖಂಡ ಗವಿಸಿದ್ದಯ್ಯ ಹಳ್ಳಿಕೇರಿಮಠ, ಕಬಾಡಿ, ಬೆಳಗಾವಿ ಜಿಲ್ಲಾಧ್ಯಕ್ಷ ಪ್ರಕಾಶ ರಾಮದುರ್ಗ, ಕರ್ನಟಕ ರಾಜ್ಯ ಪಂ.ಪುಟ್ಟರಾಜ ರೈತ ಸಂಘದ ರಾಜ್ಯಾಧ್ಯಕ್ಷ ಎಂ.ಪಿ. ಮುಳಗುಂದ, ಮಹದಾಯಿ ಹೋರಾಟಗಾರ ರಮೇಶ ನಾಯ್ಕರ ಮುಂತಾದವರಿದ್ದರು.

ಕನ್ನಡಿಗರನ್ನು ಒಗ್ಗೂಡಿಸಲು ಹೋರಾಡಿದ ಕದಂಬ ಮಯೂರವರ್ಮ ಪ್ರತಿಮೆಯನ್ನು ಬನವಾಸಿ, ಶಿರಸಿಯಲ್ಲಿ ಸ್ಥಾಪಿಸುವಂತೆ, ಚಾಲುಕ್ಯ ಸಾಮ್ರಾಜ್ಯದ ಇಮ್ಮಡಿ ಪುಲಕೇಶಿಯ ಪುತ್ಥಳಿಯನ್ನು ಬಾದಾಮಿ, ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣ ಸೌಧದ ಮುಂದೆ ಸ್ಥಾಪಿಸುವಂತೆ ಹಲವಾರು ವರ್ಷಗಳಿಂದ ಕದಂಬ ಸೈನ್ಯದಿಂದ ಮನವಿ ಮಾಡಿಕೊಂಡು ಬಂದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಹೊರ ರಾಜ್ಯದ ಸಾಮ್ರಾಟರ ಪುತ್ಥಳಿಗಳು ಕರ್ನಾಟಕದಾದ್ಯಂತ ಇವೆ. ಆದರೆ, ನಮ್ಮ ನಾಡಿನ ಶೂರರ ಪ್ರತಿಮೆ ಇಲ್ಲದಿರುವುದು ವಿಪರ್ಯಾಸ ಎಂದು ಬೇಕ್ರಿ ರಮೇಶ್ ಬೇಸರ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here