ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, 2022-23 ಹಾಗೂ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿಯು ರಾಜ್ಯದ ಸುಮಾರು 2 ಕೋಟಿ ಮಕ್ಕಳ ಶ್ರಯೋಭಿವೃದ್ಧಿಗಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮಿಸುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯಿತಿ ಕಾನ್ಫರೆನ್ಸ್ ಹಾಲ್‌ನಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ, ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಬಾಲ ಗೌರವ ಪ್ರಶಸ್ತಿ ಹಾಗೂ ವಿಶೇಷ ಗೌರವ ಪ್ರಶಸ್ತಿ ವಿತರಣಾ ಸಮಾರಂಭದ ಕುರಿತು ಮತ್ತು ಅಕಾಡೆಮಿಯ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಪ್ರತಿಭಾವಂತ ಮಕ್ಕಳಿಗೆ ನೀಡುವ ಬಾಲ ಗೌರವ ಪ್ರಶಸ್ತಿ ಹಾಗೂ ವಿಶೇಷ ಗೌರವ ಪ್ರಶಸ್ತಿಗಳನ್ನು ವಿತರಿಸುವ ಸಮಾರಂಭವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಆಯ್ಕೆ ಮಾಡಿರುವ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಈ ಪ್ರಶಸ್ತಿಗಳು ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆಯಾಗಲಿವೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಮಕ್ಕಳನ್ನು ಗೌರವಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು ಅಕಾಡೆಮಿ ಅಧ್ಯಕ್ಷರಾಗಿ ನಮ್ಮ ಜವಾಬ್ದಾರಿ. ಈ ಪ್ರಶಸ್ತಿಗಳನ್ನು ಸಚಿವರ ಮೂಲಕವೇ ಕೊಡಿಸಬೇಕೆಂಬ ಮಹದಾಸೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹಾಗೂ ನಾಡಿನ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಪ್ರಶಸ್ತಿ ನೀಡಿ, ಗೌರವ ಸಲ್ಲಿಸಲಾಗುವುದು ಎಂದು ಹೇಳಿದರು.
ಇಂದಿನ ಬದಲಾದ ಜೀವನಶೈಲಿಯಲ್ಲಿ ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಪಾಲಕರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಪಾಲಕರಿಗೆ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಧಾರವಾಡ ಬಾಲವಿಕಾಸ ಅಕಾಡೆಮಿ ವತಿಯಿಂದ ಕೊಡ ಮಾಡುವ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ, ಲೇಖಕರು, ಸಂಘ-ಸಂಸ್ಥೆಗಳಿಗೆ 25 ಸಾವಿರ ರೂ ನಗದು ಬಹುಮಾನ, ಮಕ್ಕಳ ಚಂದಿರ ಪ್ರಶಸ್ತಿಗೆ ಆಯ್ಕೆಯಾದ ಲೇಖಕರಿಗೆ 15 ಸಾವಿರ ನಗದು ಬಹುಮಾನ ಹಾಗೂ ಅಕಾಡೆಮಿ ಬಾಲ ಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ 10 ಸಾವಿರ ರೂ ನಗದು ಬಹುಮಾನ, ವಿಶೇಷ ಗೌರವ ಪ್ರಶಸ್ತಿ ಪುರಸ್ಕೃತರಿಗೆ 10 ಸಾವಿರ ರೂ ನಗದು ಬಹುಮಾನವನ್ನು ವಿತರಿಸಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಅಕ್ಕಮಹಾದೇವಿ, ವಿಶೇಷ ಕರ್ತವ್ಯ ಅಧಿಕಾರಿ ಅನ್ನಪೂರ್ಣ ಸಂಗಳದ ಹಾಗೂ ಇತರರು ಇದ್ದರು.
ಬಾಲವಿಕಾಸ ಅಕಾಡೆಮಿಯಲ್ಲಿರುವ ಅವಕಾಶ ವಂಚಿತ ಮಕ್ಕಳನ್ನು ಗುರುತಿಸಿ, ಅವರನ್ನು ನಿಸರ್ಗದ ಮಡಿಲಿಗೆ ಕರೆತರುವ ನಿಟ್ಟಿನಲ್ಲಿ ಬಾಲವಿಕಾಸ ಅಕಾಡೆಮಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. 15 ದಿನಗಳವರೆಗೆ ಅವರ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸುವ ಮೂಲಕ ರಾಜ್ಯದಲ್ಲಿನ 10 ಜನರ, ಮೂರು ತಂಡಗಳನ್ನಾಗಿಸಿ ಮಕ್ಕಳಿಗೆ ಹೊಸ ಆತ್ಮವಿಶ್ವಾಸ ತರುವ ವಿಧಾನದಿಂದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಸಾಧಕರನ್ನು ಕರೆದು, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಪ್ರಯತ್ನ ಬಾಲವಿಕಾಸ ಅಕಾಡೆಮಿ ಮಾಡುತ್ತಿದೆ ಎಂದು ಸಂಗಮೇಶ ಬಬಲೇಶ್ವರ ವಿವರಿಸಿದರು.



