ಸೋಮೇಶ್ವರನ ಸನ್ನಿಧಿಯಲ್ಲಿ ಬೆಸೆದ ಬಾಳ ಬಂಧ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ಇಂಗ್ಲೆಂಡ್ ದೇಶದ ವರ ಮತ್ತು ಹುಬ್ಬಳ್ಳಿಯ ವಧುವಿನ ವಿವಾಹ ಮಹೋತ್ಸವ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು.

Advertisement

ಎಂಎಸ್‌ಸಿ ಸೈಕಾಲಜಿ ಪದವೀಧರೆಯಾದ ಹುಬ್ಬಳ್ಳಿಯ ರೇಣುಕಾ ಧಾರವಾಡಕರ ಇಂಗ್ಲೆಂಡ್ನಲ್ಲಿ ಉದ್ಯೋಗದಲ್ಲಿದ್ದಾರೆ. ಈ ವೇಳೆ ಇಂಗ್ಲೆಂಡ್ನ ಮ್ಯಾಂಚೆಸ್ಟರ್‌ನ ಯುವಕ ಆರನ್ ಫರ್ನಿ ಅವರ ಪರಿಚಯವಾಗಿ ಎರಡೂ ಕುಟುಂಬದ ಒಪ್ಪಿಗೆ ಪಡೆದು ವಿವಾಹ ಬಂಧನಕ್ಕೊಳಗಾಗಿದ್ದಾರೆ.

ಕುಟುಂಬದ ಮನೆ ದೇವರು/ಆರಾಧ್ಯಧೈವ ಲಕ್ಮೇಶ್ವರದ ಸೋಮೇಶ್ವರನ ಸನ್ನಿಧಿಯಲ್ಲಿ ತನ್ನ ವಿವಾಹ ನೆರವೇರಬೇಕು ಎಂಬ ಮಗಳ ಇಚ್ಛೆಯಂತೆ ತಂದೆ-ತಾಯಿಗಳು ಎಲ್ಲ ಸಂಬಂಧಿಕರನ್ನು ಆಮಂತ್ರಿಸಿ ಹಿಂದೂ ಸಂಪ್ರದಾಯದಂತೆ ಅತ್ಯಂತ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು.

ದೇವಸ್ಥಾನವನ್ನು ತಳಿರು, ತೋರಣ, ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ತೆಂಗಿನ ಮಂಟಪ ಹಾಕಲಾಗಿತ್ತು. ಸೋಮೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕದೊಂದಿಗೆ ಅಲಂಕಾರಗೊಳಿಸಲಾಗಿತ್ತು. ಪುರೋಹಿತರು ವರನಿಗೆ ಲಿಂಗಧಾರಣೆ ಮಾಡಿಸಿ ಎಲ್ಲ ಮಂತ್ರೋಪದೇಶಗಳನ್ನು ಕನ್ನಡದಲ್ಲಿಯೇ ಹೇಳಿಸಿದ್ದು ವಿಶೇಷವಾಗಿತ್ತು. ಪಕ್ಕದಲ್ಲಿಯೇ ಇದ್ದ ಸ್ನೇಹಿತರು ವರನಿಗೆ ಇಂಗ್ಲೀಷಿನಲ್ಲಿ ಅದರರ್ಥ ವಿಶ್ಲೇಷಿಸಿದರು. ಮಂಗಳವಾದ್ಯ, ಮಂತ್ರಘೋಷದೊಂದಿಗೆ ಆರತಕ್ಷತೆ ನೆರವೇರಿ ಆಗಮಿಸಿದ್ದ ಇಂಗ್ಲೆಂಡ್ಡ್-ಭಾರತದ ಸಂಬಂಧಿಕರು ವಧು-ವರರಿಗೆ ಆಶೀರ್ವದಿಸಿದರು.

ವರ ಆರೆನ್‌ಗೆ ಭಾರತದ ಸಂಸ್ಕೃತಿ, ಸಂಪ್ರದಾಯ, ಆಚರಣೆ ಮತ್ತು ವಿವಾಹ ಪದ್ಧತಿಗಳ ಮೇಲೆ ಅಪಾರ ಪ್ರೀತಿ ಗೌರವವಂತೆ. ಮದುವೆ ಆಗಮಿಸಿದ್ದ ವರನ ತಂದೆ-ತಾಯಿ (ಜಿಲಿಯನ್ ಮತ್ತು ಲಿಯೋನಾರ್ಡ್ ಫರ್ನಿ), ಸಹೋದರಿಯರೂ ಸಹ ಹಣೆಗೆ ಕುಂಕುಮ, ಕೈಗೆ ಮೆಹಂದಿ ಹಚ್ಚಿ ಹಿಂದೂ ಸಂಪ್ರದಾಯಾದಂತೆ ಧೋತಿ, ಸೀರೆ ಧರಿಸಿ ಗಮನ ಸೆಳೆದಿದ್ದರು.

ಆರೆನ್ ತುಂಬಾ ಒಳ್ಳೆಯ ಹುಡುಗ. ಮಗಳ ಆಸೆ, ದೇವರ ಇಚ್ಛೆಯಂತೆ ಮನೆ ದೇವರು ಸೋಮೇಶ್ವರನ ಸನ್ನಿಧಿಯಲ್ಲಿ ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದೇವೆ ಎಂದರು ತಂದೆ-ತಾಯಿ.


Spread the love

LEAVE A REPLY

Please enter your comment!
Please enter your name here