`ಬಾಲಕೃಷ್ಣ ಸಾಹಿತ್ಯ ಪುರಸ್ಕಾರ’ ಸಮಾರಂಭ ಎ.26ಕ್ಕೆ

0
????????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಾಲಕೃಷ್ಣ ಸಾಹಿತ್ಯ ವೇದಿಕೆಯಿಂದ ನೀಡಲಾಗುವ `ಬಾಲಕೃಷ್ಣ ಸಾಹಿತ್ಯ ಪುರಸ್ಕಾರ’ ಸಮಾರಂಭವು ಎಪ್ರಿಲ್ 26ರಂದು ಬೆಳಿಗ್ಗೆ 10ಕ್ಕೆ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ ಎಂದು ವೇದಿಕೆಯ ಸಂಚಾಲಕ ಅರುಣ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಬೇಂದ್ರೆ ದರ್ಶನ ಕಾರ್ಯಕ್ರಮದ ಮೂಲಕ ಬೇಂದ್ರೆ ಸಾಹಿತ್ಯವನ್ನು ನಾಡಿಗೆ ಪರಿಚಯಿಸುತ್ತಿರುವ ಧಾರವಾಡದ ಕಲಾವಿದ, ಬೇಂದ್ರೆ ಸಾಹಿತ್ಯ ಪರಿಚಾರಕ ಅನಂತ ಕೃಷ್ಣ ದೇಶಪಾಂಡೆ 2025ರ ಬಾಲಕೃಷ್ಣ ಸಾಹಿತ್ಯ ಪುರಸ್ಕಾರವನ್ನು ಪಡೆಯಲಿದ್ದಾರೆ. ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ, ಪುರಸ್ಕಾರ ಪ್ರದಾನ ಮಾಡಲಿದ್ದು, ಕೋಟುಮಚಗಿಯ ಶ್ರೀ ಸೋಮೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವ್ಹಿ. ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಗಾಯಕಿ ರಾಜಶ್ರೀ ಅರುಣ ಕುಲಕರ್ಣಿ ಸಂಗೀತ ಸೇವೆ ನೀಡಲಿದ್ದು, ಮಹೇಶ ಕಮ್ಮಾರ ಹರ‍್ಮೋನಿಯಂ ಹಾಗೂ ಶರಣಪ್ಪ ಅರಮನಿ ತಬಲಾ ಸಾಥ್ ನೀಡಲಿದ್ದಾರೆ.

ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಮತ್ತು ನರೇಗಲ್ಲ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ರಂಗದಲ್ಲಿ ಸಾಧನೆಗೈದ ನಿವೃತ್ತ ಮುಖ್ಯ ಶಿಕ್ಷಕ ಶಿವನಗೌಡ ಗೌಡರ, ಹೆಸ್ಕಾಂನ ಎಸ್.ಎಚ್. ಭಜಂತ್ರಿ, ದಾನಿ ಮಲ್ಲಿಕಾರ್ಜುನ ಮೆಣಸಿಗಿ, ನಿವೃತ್ತ ಶಿಕ್ಷಕ ರಾಮಚಂದ್ರ ಮೋನೆ, ಎಂ.ಎ. ಕನ್ನಡದಲ್ಲಿ ಬಂಗಾರದ ಪದಕ ಪಡೆದ ಪೂಜಾ ಗ್ರಾಮಪುರೋಹಿತರನ್ನು ಸನ್ಮಾನಿಸಲಾಗುವುದು.

ಕಲಾವಿದ ಅನಂತ ದೇಶಪಾಂಡೆಯವರು ಬೇಂದ್ರೆಯವರ ಪಾತ್ರದಲ್ಲಿ ಸಾದರಪಡಿಸುವ ಬೇಂದ್ರೆ ದರ್ಶನ ಕಾರ್ಯಕ್ರಮವನ್ನು ಸವಿಯಲು ನರೇಗಲ್ಲ ಮತ್ತು ಸುತ್ತಲಿನ ಜನತೆ ಕಾತುರದಿಂದ ಕಾಯುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here