ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮೀಣ ಭಾಗದಲ್ಲಿ ಬಾಲಕೃಷ್ಣ ಸಾಹಿತ್ಯ ವೇದಿಕೆ ಉತ್ತಮವಾದ ಸಾಹಿತ್ತಿಕ ಕಾರ್ಯಗಳ ಮೂಲಕ ಜನಮಾನಸದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಇಂದು ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಪಡೆದ ನನ್ನಲ್ಲಿ ಉತ್ಸಾಹ ಹೆಚ್ಚಿದೆ ಎಂದು ಕಲಾವಿದ ಅನಂತ ದೇಶಪಾಂಡೆ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ 2025ರ ಸಾಲಿನ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಬೇಂದ್ರೆಯವರ ಜೀವನವೇ ಒಂದು ಹಾಡಾಗಿತ್ತು. ಬೆಂದು-ನೊಂದು ಬೇಂದ್ರೆ ರಚಿಸಿದ ಹಾಡುಗಳು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು. ನಂತರ ಅವರು ನೀಡಿದ ಬೇಂದ್ರೆ ದರ್ಶನ ಕಾರ್ಯಕ್ರಮ ಸರ್ವರ ಮನ ಸೂರೆಗೊಂಡಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ, ಇಂದಿಗೂ ಬೇಂದ್ರೆ ಸಾಹಿತ್ಯ ತನ್ನತನವನ್ನು ಕಳೆದುಕೊಂಡಿಲ್ಲ. ಪ್ರತಿಬಾರಿ ಓದಿದಾಗಲೂ ಅದು ಹೊಸ ಹೊಸ ಅರ್ಥವನ್ನೇ ಕೊಡುತ್ತದೆ. ಇಂದಿನ ದಿನಗಳಲ್ಲಿ ರಾಜಕಾರಣ ಮಾಡುತ್ತಿರುವವರು ಬಿಡುವು ಮಾಡಿಕೊಂಡು ಬೇಂದ್ರೆ ಸಾಹಿತ್ಯವನ್ನು ಓದಿದ್ದೇ ಆದರೆ ಈಗಿನ ದಿನಗಳಲ್ಲಿ ನಡೆಯುತ್ತಿರುವ ಅನರ್ಥಗಳನ್ನೆಲ್ಲ ತಡೆಯಬಹುದೆಂದರು.
ಅಧ್ಯಕ್ಷತೆ ವಹಿಸಿದ್ದ ಆರ್.ವ್ಹಿ,. ಕುಲಕರ್ಣಿ ಮಾತನಾಡಿ, ಬಾಲಕೃಷ್ಣ ಸಾಹಿತ್ಯ ವೇದಿಕೆ ನಡೆದು ಬಂದ ದಾರಿಯನ್ನು ವಿವರಿಸಿ, ಒಬ್ಬ ಶಿಕ್ಷಕ ಸಾಮಾಜಿಕ ಕಳಕಳಿಯುಳ್ಳವನಾಗಿದ್ದರೆ ಏನೆಲ್ಲ ಕಾರ್ಯ ಸಾಧಿಸಲು ಸಾಧ್ಯ ಎಂಬುದಕ್ಕೆ ಬಾಲಕೃಷ್ಣ ಸಾಹಿತ್ಯ ವೇದಿಕೆಯೇ ಸಾಕ್ಷಿ. ಇಂದು ಈ ವೇದಿಕೆಯಡಿಯಲ್ಲಿ ಕಲಾವಿದ ದೇಶಪಾಂಡೆಯವರಿಗೆ ಪುರಸ್ಕಾರ ನೀಡಿದ್ದು ಸ್ತುತ್ಯ ಎಂದರು.
ವೇದಿಕೆಯ ಮೇಲೆ ಆಡಳಿತಾಧಿಕಾರಿ ಎನ್.ಆರ್. ಗೌಡರ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮತ್ತು ಅನೇಕ ಸಾಧಕರು ಉಪಸ್ಥಿತರಿದ್ದರು.
ವೇದಿಕೆಯ ಸಂಚಾಲಕ ಅರುಣ ಕುಲಕರ್ಣಿ ಸ್ವಾಗತಿಸಿದರು. ಅನಿಲ ವೈದ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ.ವಿ. ವೀರಾಪೂರ ನಿರೂಪಿಸಿದರು. ಡಾ. ಕಲ್ಲಯ್ಯ ಹಿರೇಮಠ, ಎಂ.ಎಸ್. ದಢೇಸೂರಮಠ, ಸುರೇಶ ಹಳ್ಳಿಕೇರಿ ನಿರ್ವಹಿಸಿದರು. ಶಿವಯೋಗಿ ಜಕ್ಕಲಿ ವಂದಿಸಿದರು. ವಗಾಯಕಿ ರಾಜಶ್ರೀ ಕುಲಕರ್ಣಿ ಸಂಗೀತ ಸೇವೆ ನೀಡಿದರು. ಮಹೇಶ ಕಮ್ಮಾರ ಹಾರ್ಮೋನಿಯಂ, ಶರಣಪ್ಪ ಅರಮನಿ ತಬಲಾ ಸಾಥ ನೀಡಿದರು. ಸಮಾರಂಭದಲ್ಲಿ ನೂರಾರು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸಾಹಿತ್ಯ ಮನಸ್ಸನ್ನು ಅರಳಿಸುತ್ತದೆ. ಅದರಲ್ಲೂ ಬೇಂದ್ರೆಯವರ ಸಾಹಿತ್ಯ ಓದುಗನ ಮನಸ್ಸನ್ನು ಅರಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಬೇಂದ್ರೆ ದರ್ಶನದ ಮೂಲಕ ಬೇಂದ್ರೆಯವರನ್ನೇ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದ ಅನಂತ ದೇಶಪಾಂಡೆಯವರ ಕಲೆ ನಿಜಕ್ಕೂ ಶ್ಲಾಘನೀಯ. ಇಂತಹ ಕಲಾವಿದರನ್ನು ಗುರುತಿಸಿ ಅವರಿಗೆ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ನೀಡಿದ ಬಾಲಕೃಷ್ಣ ಸಾಹಿತ್ಯ ವೇದಿಕೆಯ ಕಾರ್ಯದೊಂದಿಗೆ ನಾವೂ ಇರುವುದು ಹೆಮ್ಮೆಯ ವಿಚಾರ ಎಂದರು.