ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿ ವರ್ಷ ಈದ್ ಮಿಲಾದ್ ದಿನದಂದು ಸರ್ಕಾರವು ಸಾರಾಯಿ ನಿಷೇಧಿಸಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ಗೃಹ ಸಚಿವರು, ಕಾನೂನು ಸಚಿವರಿಗೆ ಮನವಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್.ನಾಗರಕಟ್ಟಿ ಮಾತನಾಡಿ, ರಾಜ್ಯದಲ್ಲಿ ಶರಣರು, ಸೂಫಿ ಸಂತರು ಮುಂತಾದ ಮಹಾನ್ ವ್ಯಕ್ತಿಗಳ ಜಯಂತಿಯ ಅಂಗವಾಗಿ ಅವರಿಗೆ ಗೌರವ ನೀಡಲು ಸರ್ಕಾರ ಪ್ರಾಣಿವಧೆ ನಿಷೇಧಿಸಿರುವಂತೆ ಈದ್ ಮಿಲಾದ್ ದಿನದಂದು ಸರಕಾರವು ಸಂಪೂರ್ಣವಾಗಿ ಸಾರಾಯಿ ನಿಷೇಧ ಮಾಡಬೇಕು. ಮಾದಕ ವ್ಯಸನಗಳು ಸಮಾಜಕ್ಕೆ ಅಂಟಿದ ಪೀಡೆ. ಇದನ್ನು ಹೋಗಲಾಡಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಅನಿಷ್ಠ ಸಾರಾಯಿ ಕುಡಿತದಿಂದ ಜನರನ್ನು ತಡೆಯಲು ಪ್ರವಾದಿಗಳು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಮತ್ತು ಅಂದಿನ ಕಾಲದಲ್ಲಿ ಪ್ರವಾದಿಗಳು ಸರಾಯಿ ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದರು.
ಅವರ ಈ ಶ್ರಮಕ್ಕೆ ಗೌರವ ನೀಡಲು ಸರ್ಕಾರವು ಈದ್ ಮಿಲಾದ್ ದಿನದಂದು ಸಾರಾಯಿ ನಿಷೇಧ ಮಾಡಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಉಸ್ತುವಾರಿಗಳಾದ ಎಂ.ಡಿ. ಜಾಫರ್ ಡಾಲಾಯತ, ನಿರ್ದೇಶಕ ಎಲ್.ಆರ್. ಕಿತ್ತೂರು, ಮುಸ್ಲಿಂ ಸಮಾಜದ ಮುಖಂಡರಾದ ಯೂಸುಫ್ ನಮಾಜಿ, ಉಮರ್ ಫಾರೂಕ್ ಹುಬ್ಬಳ್ಳಿ, ಮಹ್ಮದ ರಫಿಕ್ ಬಡ್ನಿ, ಯು.ಎಂ. ಮಾಳಿಕೊಪ್ಪ, ಅಲ್ಲಾಭಕ್ಷಿ ಎಫ್.ದೊಡ್ಡಮನಿ, ನಾಸಿರ್ ನರೇಗಲ್, ಕರೀಮ ಸುಣ್ಣಗಾರ, ಮಕ್ತೂಮ್ ಹುಸೇನ್ ಜಮಾದಾರ, ಮುನ್ನಾ ಕಲ್ಮನಿ, ರಿಯಾಜ್ ಶೇಖ್, ಅನ್ವರ್ ನದಾಫ್, ಎ.ಜೆ. ಉಮಚಗಿ, ಅಕ್ಬರಸಾಬ ಅತ್ತಾರ್ ಮುಂತಾದವರಿದ್ದರು.


