ಬೆಂಗಳೂರು: ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಮಹಮ್ಮದ್ ಶಬ್ಬೀರ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನೂರುಲ್ಲ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಅಲಿ, ಸಯ್ಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ದಿಕ್, ಸಯ್ಯದ್ ಕಲೀಂ ಹಾಗೂ ಉಮ್ರೇಜ್ ಎಂದು ಗುರುತಿಸಲಾಗಿದೆ. ಹಳೆ ವೈಷಮ್ಯದ ಹಿನ್ನೆಲೆ ಶಬ್ಬೀರ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ 12ನೇ ತಾರೀಖು ಸಂಜೆ ಸುಮಾರು 5 ಗಂಟೆ ವೇಳೆಗೆ, ಆರೋಪಿಗಳು ಶಬ್ಬೀರ್‌ನನ್ನು ಹಿಂಬಾಲಿಸಿಕೊಂಡು ಮಂಗಮ್ಮನ ಪಾಳ್ಯದ ಪೆಟ್ರೋಲ್ ಬಂಕ್ ಬಳಿ ತಡೆದು ನಿಲ್ಲಿಸಿ, ಮೊದಲು ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಶಬ್ಬೀರ್, ಹಲವು ವಿಚಾರಗಳಲ್ಲಿ ಆರೋಪಿಗಳೊಂದಿಗೆ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಈ ಕಾರಣದಿಂದ ಆರೋಪಿಗಳು ಹಲವು ದಿನಗಳಿಂದ ಸಂಚು ರೂಪಿಸಿ, ಶಬ್ಬೀರ್ ಚಲನವಲನಗಳ ಮೇಲೆ ನಿಗಾ ಇಟ್ಟು ಕೊಲೆ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕೊಲೆ ಬಳಿಕ ಆರೋಪಿಗಳು ಹೈದ್ರಾಬಾದ್ ಹಾಗೂ ಮುಂಬೈಗೆ ತಲೆಮರೆಸಿಕೊಂಡಿದ್ದರು. ಕುಟುಂಬಸ್ಥರನ್ನು ಭೇಟಿ ಮಾಡಲು ಇಂದು ರೈಲ್ವೆ ನಿಲ್ದಾಣಕ್ಕೆ ಬಂದ ವೇಳೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಎಲ್ಲಾ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.



