ಬೆಂಗಳೂರು: ನಗರದಲ್ಲಿ ಮಹಾರಾಷ್ಟ್ರ ಪೊಲೀಸ್ ಎಎನ್‌ಟಿಎಫ್ ನಡೆಸಿದ ಭರ್ಜರಿ ಡ್ರಗ್ಸ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಪ್ರಕರಣದಲ್ಲಿ ಕೊತ್ತನೂರು, ಬಾಗಲೂರು ಮತ್ತು ಅವಲಹಳ್ಳಿ ಪೊಲೀಸ್ ಠಾಣೆಗಳ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಎಎನ್‌ಟಿಎಫ್ ತಂಡ ಬೆಂಗಳೂರಿನ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿಗಳನ್ನು ಪತ್ತೆಹಚ್ಚಿ, ಸುಮಾರು 55.88 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಎಂಡಿ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿತ್ತು. ಈ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಮುಂಬೈನಲ್ಲಿ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಬಳಿಕ ನಡೆದ ತನಿಖೆಯಲ್ಲಿ ಅಬ್ದುಲ್ಲ ಖಾದರ್ ಶೇಖ್ ಮತ್ತು ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಬಂಧನವಾಗಿತ್ತು. ಪಾಟೀಲ್ ನೀಡಿದ ಮಾಹಿತಿಯ ಮೇರೆಗೆ ಹೊರಮಾವು, ಯರಪ್ಪನಹಳ್ಳಿ ಮತ್ತು ಕಣ್ಣೂರು ಸಮೀಪ ಆರ್‌ಜೆ ಇವೆಂಟ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 4.1 ಕೆಜಿ ಘನ ಎಂಡಿ ಮತ್ತು 17 ಕೆಜಿ ದ್ರವ ಎಂಡಿ ಸೇರಿ ಒಟ್ಟು 21.4 ಕೆಜಿ ಡ್ರಗ್ಸ್, ಯಂತ್ರೋಪಕರಣಗಳು ಹಾಗೂ ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜಸ್ಥಾನ ಮೂಲದ ಕಿಂಗ್‌ಪಿನ್‌ಗಳು ಈ ದಂಧೆ ನಡೆಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ದೇಶದ ಹಲವು ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತರ ವಿಚಾರಣೆ ಮುಂದುವರಿದಿದ್ದು, ಪ್ರಮುಖ ಆರೋಪಿಗಳಿಗಾಗಿ ಮಹಾರಾಷ್ಟ್ರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.



