ಬೆಂಗಳೂರು: ಎಐ ಯುವತಿಯ (AI Girl) ಬಲೆಗೆ ಬಿದ್ದು ಬೆಂಗಳೂರಿನ 26 ವರ್ಷದ ಯುವಕನೊಬ್ಬ ಸುಮಾರು 1.53 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯುವಕ Happn ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದು, ಇಶಾನಿ ಎಂಬ ಹೆಸರಿನ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ.
ನಂತರ ಇಬ್ಬರ ನಡುವೆ ಮೊಬೈಲ್ ನಂಬರ್ ವಿನಿಮಯವಾಗಿ ಖಾಸಗಿ ವಿಚಾರಗಳ ಬಗ್ಗೆ ಚಾಟಿಂಗ್ ಆರಂಭವಾಗಿದೆ. ಕೆಲ ದಿನಗಳ ಬಳಿಕ ಯುವತಿಯ ಮೊಬೈಲಿನಿಂದ ಯುವಕನಿಗೆ ವಿಡಿಯೋ ಕಾಲ್ ಬಂದಿದೆ. ಆ ವಿಡಿಯೋ ಕಾಲ್‌ನಲ್ಲಿ ಯುವತಿ ಬೆತ್ತಲಾಗಿದ್ದಳು. ಬಳಿಕ ಯುವಕನಿಗೂ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದು, ಯುವಕ ಆಕೆಯ ಮಾತಿಗೆ ಮರುಳಾಗಿ ಬೆತ್ತಲಾಗಿದ್ದಾನೆ.
ಈ ಸಂದರ್ಭವನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡು, ಯುವಕನ ಬೆತ್ತಲೆ ವಿಡಿಯೋ ಮತ್ತು ಫೋಟೊಗಳನ್ನು ಆತನಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಯುವಕನಿಂದ 1.53 ಲಕ್ಷ ರೂ. ವಸೂಲಿ ಮಾಡಲಾಗಿದೆ. ಇನ್ನೂ ಹಣ ಕೇಳಲು ಆರಂಭಿಸಿದಾಗ ಯುವಕ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಎಐ ತಂತ್ರಜ್ಞಾನ ಬಳಸಿ ಯುವತಿಯಂತೆ ನಟಿಸಿ ಈ ವಂಚನೆ ನಡೆಸಿರುವ ಸಾಧ್ಯತೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.



