ಬೆಂಗಳೂರು:- ನಗರದಲ್ಲಿರುವ ರಸ್ತೆಗುಂಡಿಗಳ ಆಕಾರದಂತೆ ಬೆಂಗಳೂರಿನ ಅಭಿವೃದ್ಧಿಯೂ ಸೊನ್ನೆಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕೆ ಮಾಡಿದ್ದಾರೆ.
ಬಿಬಿಎಂಪಿ ಚುನಾವಣೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಸ್ತೆ ಗುಂಡಿಗಳ ಆಕಾರ ಸೊನ್ನೆಯಾಗಿರುವಂತೆಯೇ ಬೆಂಗಳೂರಿನ ಅಭಿವೃದ್ಧಿಯೂ ಸೊನ್ನೆಯೇ ಆಗಿದೆ. ಅಭಿವೃದ್ಧಿಗಾಗಿ ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದರು.
ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಈ ಸಂಬಂಧ ನ್ಯಾಯಾಲಯದಲ್ಲಿ ವಾದ ಮಾಡಲು 15 ತಜ್ಞರ ತಂಡವನ್ನು ರಚಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿ ಸೊನ್ನೆಯಾಗಿದೆ. ರಸ್ತೆ ಗುಂಡಿಗಳ ಆಕಾರ ಸೊನ್ನೆಯಾಗಿರುವಂತೆಯೇ ಅಭಿವೃದ್ಧಿಯೂ ಸೊನ್ನೆಯೇ ಆಗಿದೆ. ರಸ್ತೆ ಗುಂಡಿಗಳಿಂದ ಬಿದ್ದು ಗಾಯಕ್ಕೊಳಗಾಗಿ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಎಲ್ಲಾ ಕಡೆ ಕಸದ ರಾಶಿ ಕಂಡುಬರುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿಮಾಲಯದ ಶಿಖರದಂತೆ ನಗರದ ಅಭಿವೃದ್ಧಿಯನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅವರೇ ಬೆಂಗಳೂರನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಲು ಸಭೆ ನಡೆಸಲಾಗಿದೆ ಎಂದರು.