ವಿಜಯಸಾಕ್ಷಿ ಸುದ್ದಿ, ಗದಗ/ಬೆಂಗಳೂರು: ಇಂದು ಕೇಂದ್ರ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಆಯ್ಕೆ ಪ್ರಕ್ರಿಯೆ ರಾಷ್ಟ್ರ ಮಟ್ಟದಲ್ಲಿ ಹಿಂದಿ-ಇಂಗ್ಲಿಷ್‌ಗಳಲ್ಲಿ ಮಾತ್ರ ನಡೆಯುತ್ತಿದ್ದು, ಸ್ಥಳೀಯರಿಗೆ ಬ್ಯಾಂಕ್‌ಗಳಲ್ಲಿ ಕೆಲಸ ಸಿಗುತ್ತಿಲ್ಲ. ಕನ್ನಡಿಗರಿಗೆ ಬ್ಯಾಂಕ್‌ಗಳಲ್ಲಿ ಸೂಕ್ತ ಅವಕಾಶ ಸಿಗಲು ಆಯ್ಕೆ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಮಾಜಿ ರಾಜ್ಯಸಭಾ ಸದಸ್ಯ, ಖ್ಯಾತ ಸಾಹಿತಿ ಡಾ. ಎಲ್. ಹನುಮಂತಯ್ಯ ಆಗ್ರಹಿಸಿದರು.
ಅವರು ಬೆಂಗಳೂರಿನ ನಯನ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗ, ಕರ್ನಾಟಕ ಕಾರ್ಮಿಕಲೋಕ ಸಂಯುಕ್ತವಾಗಿ ಆಯೋಜಿಸಿದ್ದ ಪ್ರಶಸ್ತಿಗಳ ಪ್ರದಾನ, ಪುಸ್ತಕ ಬಹುಮಾನ, ಕನ್ನಡ ಮಾಧ್ಯಮದ ಮಕ್ಕಳಿಗೆ ‘ಸನ್ಮಾನ-ಬಹುಮಾನ’ ಮತ್ತು ಉತ್ತಮ ಸರ್ಕಾರಿ ಶಾಲೆಗೆ ಬಹುಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಯಾವುದೇ ಸಾರ್ವಜನಿಕ ಬ್ಯಾಂಕ್‌ಗಳಿಗೆ ಹೋದರೂ ಕನ್ನಡ ಮಾತನಾಡುವ ಸಿಬ್ಬಂದಿ ಸಿಗವುದು ದುರ್ಲಭವಾಗಿದೆ. ಇದರಿಂದ ಸ್ಥಳೀಯರು ಬ್ಯಾಂಕ್ ವ್ಯವಹಾರ ನಡೆಸಲು ಒದ್ದಾಡುವ ಪರಿಸ್ಥಿತಿ ಇದೆ. ಉದ್ಯೋಗದ ಜೊತೆಗೆ ನಾವು ಕನ್ನಡದ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಗಮನ ನೀಡಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತರಬೇಕು. ಉಳ್ಳವರು ಸರ್ಕಾರದ ಶಾಲೆಗಳನ್ನು ದತ್ತು ಪಡೆದು ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಟಿ.ಎಸ್. ನಾಗಾಭರಣ ಮಾತನಾಡಿ, 1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದಾಗ ರಾಜ್ಯದ ಗಡಿ, ಅಧಿಕಾರಗಳಂತಹ ವಿಚಾರವನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಆದರೆ, ರಾಜ್ಯ ಭಾಷೆಗಳ ಸ್ಥಾನಮಾನ ವ್ಯಾಪ್ತಿಯ ಬಗ್ಗೆ ಸಂವಿಧಾನಕ್ಕೆ ಅಗತ್ಯ ಮಾರ್ಪಾಡು ಮಾಡಲಿಲ್ಲ. ಹಾಗಾಗಿ ಕನ್ನಡ ಶಿಕ್ಷಣ, ಆಡಳಿತ, ಸಾರ್ವಜನಿಕ ವಲಯಗಳ ಬಳಕೆಯ ಬಗ್ಗೆ ಗೊಂದಲವಿದೆ. ಇಂದು ಕನ್ನಡವೂ ಸೇರಿದಂತೆ ಎಲ್ಲ ರಾಜ್ಯದ ಭಾಷೆಗಳ ಉಳಿವಿಗೆ ಸಾಂವಿಧಾನಿಕವಾಗಿಯೇ ಬದಲಾವಣೆ ತರುವ ಅಗತ್ಯವಿದೆ ಎಂದು ಹೇಳಿದರು.
ಗಾಂಧಿವಾದಿ ಶಿಕ್ಷಣ ತಜ್ಞ ನಾಡೋಜ ಡಾ. ವೂಡೇ ಪಿ.ಕೃಷ್ಣ ಮಾತನಾಡಿ, ಕನ್ನಡಿಗರು ಇಂಗ್ಲಿಷ್ ವ್ಯಾಮೋಹದಿಂದ ಹೊರಬರಬೇಕು. ದೇಶದ ೧೪೦ ಕೋಟಿಯಲ್ಲಿ ಇಂಗ್ಲಿಷ್ ಬಲ್ಲವರ ಸಂಖ್ಯೆ ಕೇವಲ ೧೨ ಕೋಟಿ ಮಾತ್ರ. ಚೀನಾದಲ್ಲಿ ಯಾರೂ ಇಂಗ್ಲಿಷ್‌ನಲ್ಲಿ ಕಲಿಯುವುದಿಲ್ಲ. ಎಲ್ಲ ಹೊಸ ತಂತ್ರಜ್ಞಾನಗಳು ಚೀನಿ ಭಾಷೆಯಲ್ಲಿ ಲಭ್ಯವಿದೆ. ನಮ್ಮ ಕನ್ನಡದಲ್ಲೂ ಹಾಗೇ ಆದರೆ ಕನ್ನಡದ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ರಾ.ನಂ. ಚಂದ್ರಶೇಖರ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಶಿಕ್ಷಣದಲ್ಲಿ ಉಳಿಯುತ್ತದೆ. ತನ್ಮೂಲಕ ಕನ್ನಡದ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿರುವ ಕನ್ನಡ ಗೆಳೆಯರ ಬಳಗ ಉತ್ತಮ ಸಾಧನೆ ಮಾಡಿದ ಕನ್ನಡ ಶಾಲೆಗಳಿಗೆ ಬಹುಮಾನ ನೀಡುತ್ತಿದೆ. ಕನ್ನಡ ಸಂಘಟನೆಗಳು ಕನ್ನಡ ಸಮಸ್ಯೆಗಳು ಉದ್ಭವಿಸಿದಾಗ ಹೋರಾಟ ಮಾಡುವುದರ ಜೊತೆಗೆ ಇಂತಹ ಕನ್ನಡ ಕಟ್ಟುವ ಕೆಲಸಕ್ಕೂ ಮುಂದಾಗಬೇಕೆAದು ಮನವಿ ಮಾಡಿದರು.
ಇದೇ ಸಮಾರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳಿಸಿದ 10 ಮಕ್ಕಳಿಗೆ ಸನ್ಮಾನ-ಬಹುಮಾನ, ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ಕನ್ನಡೇತರ ಮಕ್ಕಳಿಗೆ ಸನ್ಮಾನ ಮತ್ತು ಉತ್ತಮ ಕನ್ನಡ ಶಾಲೆಗೆ ನೀಡುವ 10 ಸಾವಿರ ರೂ. ಬಹುಮಾನವನ್ನು ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ನಿರ್ವಹಣೆ ತೋರುತ್ತಿರುವ ಹೆಬ್ಬೂರಿನ ಕನ್ನಡ ಮಾಧ್ಯಮದ ಅನುದಾನಿತ ಶ್ರೀಗಣಪತಿ ಪ್ರೌಢಶಾಲೆಗೆ ನೀಡಲಾಯಿತು. 60 ವರ್ಷಗಳಿಂದ ಕನ್ನಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಬೆ.ರಾ. ನಾಗರಾಜ್ ಮತ್ತು ಬಿ.ಸಿ. ಜಯರಾಂ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರ ವ.ಚ. ಚನ್ನೇಗೌಡ, ಭಾರತಿ ಶೇಷಗಿರಿರಾವ್, ಬಾ.ಹ. ಉಪೇಂದ್ರ, ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಮ. ಚಂದ್ರಶೇಖರ, ಎಚ್.ಎ.ಎಲ್. ಕನ್ನಡ ಮುಖಂಡ ಆರ್. ರಾಮಸ್ವಾಮಿ, ಕರ್ನಾಟಕ ಕಾರ್ಮಿಕಲೋಕದ ಬಿ.ವಿ. ರವಿಕುಮರ್, ಡಾ. ಅರ್. ಶೇಷಶಾಸ್ತ್ರಿ, ಡಾ. ಸ್ಮಿತಾ ರೆಡ್ಡಿ ಮತ್ತು ರಾಜಭವನದ ಕಾರ್ಯದರ್ಶಿ ಆರ್. ಪ್ರಭುಶಂಕರ್ ಮುಂತಾದವರು ಉಪಸ್ಥಿತರಿದ್ದರು.
- ಪ್ರೊ. ಆರ್. ವೇಣುಗೋಪಾಲ್ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ, ಹೊಸೂರು ನಾಗರಾಜ್ ಅವರಿಗೆ ಕನ್ನಡ ಚಿರಂಜೀವಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನವನ್ನು ಪತ್ರಕರ್ತ ಡಾ. ಮಂಜುನಾಥ ಬಮ್ಮನಕಟ್ಟಿ, ಸಮಾಧಾನಕರ ಬಹುಮಾನವನ್ನು ಅನುವಾದಕ ಮೋಹನ್ ಕುಂಟಾರ್ ಮತ್ತು ಡಾ. ಎಸ್.ಗುರುಮೂರ್ತಿ ಅವರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.