ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಬ್ಯಾಂಕ್ ಉದ್ಯೋಗ ಪಡೆಯುವುದು ಇನ್ನಷ್ಟು ಕಠಿಣವಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ.
ಇದೀಗ ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ಆದರೆ, ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಹೆಚ್ಚಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕರ ಹಣವನ್ನು ನಿರ್ವಹಿಸುವ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಶುದ್ಧ ಹಣಕಾಸು ದಾಖಲೆ ಹೊಂದಿರಬೇಕು ಎಂಬುದು ಬ್ಯಾಂಕುಗಳ ಉದ್ದೇಶವಾಗಿದೆ.
ಸಾಲ ಮರುಪಾವತಿಯಲ್ಲಿ ವಿಳಂಬ ಮಾಡಿರುವವರು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸರಿಯಾದ ಸಮಯಕ್ಕೆ ಪಾವತಿಸದವರ ವಿಶ್ವಾಸಾರ್ಹತೆಯ ಮೇಲೆ ಬ್ಯಾಂಕುಗಳು ಸಂಶಯ ವ್ಯಕ್ತಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಕಳಪೆ ಕ್ರೆಡಿಟ್ ದಾಖಲೆ ಹೊಂದಿರುವವರಿಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು.
ಈ ನಿಯಮ ಎಲ್ಲಾ ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಅನ್ವಯವಾಗಲಿದೆ. ವಿಶೇಷವಾಗಿ ಇಎಂಐ ಪಾವತಿಸದೇ ಇರುವವರು ಅಥವಾ ಬಾಕಿ ಉಳಿಸಿಕೊಂಡಿರುವವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆಯ್ಕೆ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳು ತಮ್ಮ ಸಿಬಿಲ್ ವರದಿಯನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಸಮರ್ಪಕ ವಿವರಣೆ ನೀಡಲು ವಿಫಲರಾದರೆ, ಅಂತಿಮವಾಗಿ ಆಯ್ಕೆಯಾಗಿದ್ದರೂ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.
ಆದರೆ, ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳಿಗೆ ಕೆಲವು ಸಡಿಲಿಕೆ ನೀಡಲಾಗಿದೆ. ಹಣಕಾಸಿನ ಅಡಚಣೆಯಿಂದಾಗಿ ಶಿಕ್ಷಣ ಸಾಲದ ಮರುಪಾವತಿ ವಿಳಂಬವಾಗಿದ್ದರೆ, ಅದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ಬ್ಯಾಂಕುಗಳು ತಿಳಿಸಿವೆ.
ತಜ್ಞರ ಪ್ರಕಾರ, ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳು ತಮ್ಮ ಕ್ರೆಡಿಟ್ ಸ್ಕೋರ್‌ನ್ನು ನಿಯಮಿತವಾಗಿ ಪರಿಶೀಲಿಸಿ, ಬಾಕಿ ಇರುವ ಸಾಲಗಳನ್ನು ತಕ್ಷಣ ತೀರಿಸುವುದು ಉತ್ತಮ. ಜೊತೆಗೆ ಬ್ಯಾಂಕಿನಿಂದ ‘ನೋ ಒಬ್ಜೆಕ್ಷನ್ ಸರ್ಟಿಫಿಕೆಟ್’ ಪಡೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಉದ್ಯೋಗದ ವೇಳೆ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಬಹುದು.



