ಮಂಡ್ಯ:- ಸೈಬರ್ ವಂಚಕರ ಜಾಲಕ್ಕೆ ಸ್ವತಃ ಬ್ಯಾಂಕ್ ಮ್ಯಾನೇಜರ್ ಸಿಲುಕಿ ಬರೋಬ್ಬರಿ 50 ಲಕ್ಷ ರೂ ಕಳೆದುಕೊಂಡಿರುವಂತಹ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಆ ಮೂಲಕ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಬ್ಯಾಂಕ್ ಮ್ಯಾನೇಜರ್ಗೆ ವಂಚಿಸಲಾಗಿದೆ.
ವಂಚನೆಗೆ ಒಳಗಾದವರನ್ನು ಮಂಡ್ಯದ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಭವ್ಯ ಎಂದು ಗುರುತಿಸಲಾಗಿದೆ. ಮನಿ ಲಾಂಡರಿಂಗ್, ಬೆದರಿಕೆ ಕರೆ ಆರೋಪ ನೆಪದಲ್ಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿದ್ದಾರೆ. ಹವಾಲ ದಂಧೆಯಲ್ಲಿ ಭಾಗಿಯಾಗಿದ್ದೀರಿ. ನಿಮ್ಮಿಂದ ಹಲವರಿಗೆ ಬೆದರಿಕೆ ಕರೆ ಹೋಗಿದೆ ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ.
ನಿಮ್ಮ ಖಾತೆಯಲ್ಲಿರುವ ಹಣ ನಮ್ಮ ಖಾತೆಗೆ ಕಳುಹಿಸಿ. ಸಮಸ್ಯೆ ಬಗೆಹರಿಸಿ ಸಂಜೆಯೊಳಗಾಗಿ ವಾಪಸ್ ಹಾಕುತ್ತೇವೆ ಎಂದು ನಂಬಿಸಿದ್ದಾರೆ. ಹಣ ಕಳುಹಿಸುವವರೆಗೂ ಎಲ್ಲೂ ಕದಲದಂತೆ ವಿಡಿಯೋ ಕಾಲ್ ಮೂಲಕ ಸೂಚನೆ ನೀಡಿದ್ದಾರೆ. ಬಳಿಕ ತಮ್ಮ ಖಾತೆಗೆ ಹಣ ಬರುತ್ತಿದ್ದಂತೆ ಬೇರೆ ಬೇರೆ 29 ಖಾತೆಗೆ ಖದೀಮರು ಹಣ ವರ್ಗಾವಣೆ ಮಾಡಿದ್ದಾರೆ. ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿದ ಮ್ಯಾನೇಜರ್ 50 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ.
ಇತ್ತ ವಂಚಿತ ಮ್ಯಾನೇಜರ್ ಭವ್ಯ ದೂರಿನ ಮೇರೆಗೆ ಮಂಡ್ಯ ಸೆನ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಹಣ ವರ್ಗಾವಣೆ ಆದ ಬ್ಯಾಂಕ್ ಖಾತೆಗಳ ಜಾಡು ಹಿಡಿದು ಹೋದ ಖಾಕಿ, ರಾಜಸ್ಥಾನದಲ್ಲಿ ಮೂವರು ಸೈಬರ್ ಕಳ್ಳರನ್ನು ಬಂಧಿಸಿದ್ದಾರೆ. ಗೋಪಾಲ್ ಬಿಷ್ಣೋಯಿ, ಮಹಿಪಾಲ್ ಬಿಷ್ಣೋಯಿ, ಜಿತೇಂದ್ರ ಸಿಂಗ್ ಬಂಧಿತರು. ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಆರೋಪಿಗಳು ವಂಚಿಸುತ್ತಿದ್ದರು ಎಂದು ತಿಳಿದು ಬಂದಿದೆ.