ಬೆಂಗಳೂರು:- ಬ್ಯಾಂಕ್ ಹಗರಣ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ವಿಧಿಸಿದ್ದ 3 ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿದೆ.
ಹಗರಣದಲ್ಲಿ ಕೃಷ್ಣಯ್ಯ ಶೆಟ್ಟಿಗೆ ಕೆಳಹಂತದ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ನೀಡಿತ್ತು. ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ಕೃಷ್ಣಯ್ಯ ಶೆಟ್ಟಿಗೆ ಶಿಕ್ಷೆ ಅಮಾನತುಗೊಳಿಸಿ ದಂಡದ ಮೊತ್ತ ಠೇವಣಿ ಇಡಲು ಹೈಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತು ಇತರ ಆರೋಪಿಗಳು ಮೆಸರ್ಸ್ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್ ಮೂಲಕ ನಕಲಿ ವೇತನ ಸರ್ಟಿಫಿಕೆಟ್ ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರುನಿಂದ 7.17 ಕೋಟಿ ಮೊತ್ತ ಗೃಹ ಸಾಲ ಪಡೆದಿದ್ದರು. ಈ ಪೈಕಿ ವಿವಿಧ ಖಾತೆಗಳ 3.53 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದ್ದು, ಆ ಮೂಲಕ ಬ್ಯಾಂಕ್‌ಗೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಖ್ಯ ವಿಚಕ್ಷಣಾಧಿಕಾರಿ 2008ರ ಜನವರಿ 30ರಂದು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಸಿಬಿಐ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರನ್ನು ದೋಷಿಗಳು ಎಂದು ತೀರ್ಮಾನಿಸಿ, ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟಾರೆ 21.5 ಲಕ್ಷ ದಂಡ ವಿಧಿಸಿ 2025ರ ಫೆಬ್ರವರಿ 6ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೃಷ್ಣಯ್ಯ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.