ಬಳ್ಳಾರಿ:- ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಮೃತ ಯುವಕನ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ 25 ಲಕ್ಷ ರೂ. ನಗದು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ.
ಹಿಂದುಪರ ಕಾರ್ಯಕರ್ತ ತೇಜಸ್ ಗೌಡ ಅವರು ದೂರಿನಲ್ಲಿ, ಸಚಿವರು ನಗದು ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಹಣದ ಮೂಲ ಮತ್ತು ವಿತರಣೆಯನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ನೀಡಿದ್ದ ಜಮೀರ್:
ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ಮಾಡಿದ್ದರು. ಜೊತೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿದ್ದರು.
ಘಟನೆ ನಡೆದು ಎರಡು ದಿನಗಳ ಬಳಿಕ ಬಳ್ಳಾರಿಗೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರು ನೇರವಾಗಿ, ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಹುಸೇನ್ ನಗರದಲ್ಲಿರುವ ಮೃತರ ಮನೆಗೆ ತೆರಳಿದ ಸಚಿವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ತಮ್ಮ ವೈಯಕ್ತಿಕ ಖಾತೆಯಿಂದ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಹಸ್ತಾಂತರಿಸಿದರು.



