ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ನಡೆದ ಮಾರಾಮಾರಿಯಲ್ಲಿ ಬುಲೆಟ್ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್ ಫೈರಿಂಗ್ ಮಾಡಿದ್ದ ಬಂದೂಕಿನ ಗುಂಡು ತಗುಲಿಯೇ ರಾಜಶೇಖರ್ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ.
12 ಎಂಎಂ ಬುಲೆಟ್‌ನಿಂದ ರಾಜಶೇಖರ್ ಜೀವ ಕಳೆದುಕೊಂಡಿದ್ದು, ಇದೇ ಮಾದರಿಯ ಗನ್ ಅನ್ನು ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್ ಬಳಸಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೂಸ್ ಪೇಟೆ ಪೊಲೀಸರು ಈಗಾಗಲೇ 5 ಗನ್‌ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಓರ್ವ ಗನ್‌ಮ್ಯಾನ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ.
ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಗುಂಪುಗಳ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, 50ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಇಂದು ಮಧ್ಯಾಹ್ನದೊಳಗೆ ಪ್ರಮುಖ ಆರೋಪಿಗಳು ಸೇರಿದಂತೆ ಹಲವರ ಬಂಧನ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲಾಟೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಬಂಧನವೂ ಸಂಭವಿಸಬಹುದು ಎನ್ನಲಾಗಿದೆ.
ಸತೀಶ್ ರೆಡ್ಡಿ ಸ್ಥಳಕ್ಕೆ ಬಂದ ನಂತರವೇ ಗಲಾಟೆ ತೀವ್ರಗೊಂಡಿದ್ದು, ಜನಾರ್ದನ ರೆಡ್ಡಿ ಬೆಂಬಲಿಗರು ಸತೀಶ್ ರೆಡ್ಡಿ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭ ಸತೀಶ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್ ನಡೆಸಿದ್ದರು ಎಂದು ತಿಳಿದುಬಂದಿದೆ. ಈ ಪ್ರಕರಣದ ಪರಿಣಾಮವಾಗಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗಲಾಟೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟಾರೆ 6 ಪ್ರಕರಣಗಳು ದಾಖಲಾಗಿವೆ.



