ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ಬಿಜೆಪಿಗೆ ದೊಡ್ಡ ರಾಜಕೀಯ ಅಸ್ತ್ರವಾಗಿದ್ದು, ಗುಂಡೇಟಿಗೆ ಓರ್ವ ಕಾರ್ಯಕರ್ತ ಸಾವನ್ನಪ್ಪಿದ ಘಟನೆಯನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಬಿಜೆಪಿ ನಾಯಕರಾದ ರೆಡ್ಡಿ ಹಾಗೂ ಶ್ರೀರಾಮುಲು ಸಮರಕ್ಕೆ ಸಜ್ಜಾಗಿದ್ದಾರೆ.
ಇದರ ಭಾಗವಾಗಿ ನಾಳೆ ಬಳ್ಳಾರಿ ನಗರದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಶಾಂತಿಯಾಗಿ ನಡೆಯುವ ದೃಷ್ಟಿಯಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ನಡುವೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಮದ್ಯ ಮಾರಾಟ ನಿಷೇಧಕ್ಕೆ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ಇಂದು ರಾತ್ರಿ 10 ಗಂಟೆಯಿಂದ ನಾಡಿದ್ದು ಜನವರಿ 18ರ ಬೆಳಿಗ್ಗೆ 6 ಗಂಟೆಯವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ವಿತರಣೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಮದ್ಯದ ಅಂಗಡಿ, ಬಾರ್, ರೆಸ್ಟೋರೆಂಟ್ ಸೇರಿದಂತೆ ಮದ್ಯ ಮಾರಾಟ ನಡೆಯುವ ಎಲ್ಲ ಸ್ಥಳಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಜನವರಿ 1ರಂದು ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಹಾಕಲಾಗಿದ್ದ ಬ್ಯಾನರ್ ವಿಚಾರವಾಗಿ ಉಂಟಾದ ಗುಂಪು ಘರ್ಷಣೆಯನ್ನೇ ಖಂಡಿಸಿ, ಜನವರಿ 17ರಂದು ಬೆಳಿಗ್ಗೆ 10:30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಬಳ್ಳಾರಿ ನಗರ ಎಪಿಎಂಸಿ ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕವರ್ಡ್ ಯಾಕ್ಷನ್ ಪ್ಲಾಟ್‌ಫಾರಂನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಿದ್ದಾರೆ.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಪೊಲೀಸ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.



