ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ಆಡಿದ ಮಾತುಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘ತಮಿಳಿನಿಂದಲೇ ಕನ್ನಡದ ಜನನವಾಗಿದೆ’ ಎಂದು ಹೇಳುವ ಮೂಲಕ ಕಮಲ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಮಲ್ ಹೇಳಿಕೆಯನ್ನು ಹಲವರು ಖಂಡಿಸಿದ್ದಾರೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಅವರು ಕಮಲ್ ಹಾಸನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದು ಕಮಲ್ ಪರ ರಮ್ಯಾ ಬ್ಯಾಟ್ ಬೀಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಡ್ರಾವಿಡ ಭಾಷೆಗಳ ಉಗಮದ ಚಾರ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ರಮ್ಯಾ ಹಂಚಿಕೊಂಡಿರುವ ಕೋಷ್ಠಕದ ಪ್ರಕಾರ ದ್ರಾವಿಡ ಭಾಷೆಯ ಮೂಲಕವೇ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಇನ್ನೂ ಅನೇಕ ಉಪ ಭಾಷೆಗಳ ಉಗಮವಾಗಿದೆ.
ಚಾರ್ಟ್ ಹಂಚಿಕೊಂಡಿರುವ ಜೊತೆಗೆ ಸಂದೇಶವೊಂದನ್ನು ಸಹ ರಮ್ಯಾ ಹಂಚಿಕೊಂಡಿದ್ದು, ದ್ರಾವಿಡ ಭಾಷೆಗಳ ಅಡಿಯಲ್ಲಿಯೇ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳು ಪರಸ್ಪರ ಸಾಮ್ಯತೆಗಳನ್ನು ಹೊಂದಿವೆ ಆದರೆ ಯಾವ ಭಾಷೆಯೂ ಇನ್ನೊಂದು ಭಾಷೆಗಿಂತಲೂ ಶ್ರೇಷ್ಠ ಎಂದಿಲ್ಲ. ಇನ್ನು ಕೆಲವರು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದುಕೊಂಡಿರುವವರು ಇದ್ದಾರೆ. ಆದರೆ ಅದೂ ಸಹ ನಿಜವಲ್ಲ. ಏಕೆಂದರೆ ಸಂಸ್ಕೃತ ಇಂಡೋ-ಆರ್ಯನ್ ಭಾಷೆ. ಆದರೆ ನಾವು ದ್ರಾವಿಡರು. ಇಂಡೋ ಆರ್ಯನ್ನರು ಇಲ್ಲಿಗೆ ವಲಸೆ ಬರುವುದಕ್ಕೆ ಬಹಳ ವರ್ಷಗಳ ಮುಂಚೆಯೇ ನಾವು ಇಲ್ಲಿದ್ದೀವಿ’ ಎಂದಿದ್ದಾರೆ.
‘ಕಮಲ್ ಹಾಸನ್ ಅವರು ಒಂದು ಬಿಡು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಆ ಮಾತ್ರಕ್ಕೆ ಅವರ ಸಿನಿಮಾ ಅನ್ನು ನಿಷೇಧ ಮಾಡಲು ಮುಂದಾಗಿರುವುದು ತುಸು ಅತಿರೇಕ ಅನಿಸುವುದಿಲ್ಲವೆ? ನಾವುಗಳು ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಆದರೆ ಅದಕ್ಕೂ ಮುನ್ನ ನಾವು ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕಿದೆ’ ಎಂದು ಹೇಳಿದ್ದಾರೆ.