ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ನಾಯಕ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ, ಈ ಅರ್ಜಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡಿತು. ದಸರಾ ಉದ್ಘಾಟನೆ ವಿಷಯದಲ್ಲಿ ಅರ್ಜಿದಾರರ ಯಾವುದೇ ಹಕ್ಕು ಉಲ್ಲಂಘನೆ ಆಗಿಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ. ಅವರು ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು. ಭುವನೇಶ್ವರಿ, ಕನ್ನಡ ಬಾವುಟದ ಬಗ್ಗೆ ಮುಷ್ತಾಕ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದ ವಕೀಲರು, ಬಾನು ಮುಷ್ತಾಕ್ ನೀಡಿದ ಹೇಳಿಕೆಯ ಇಂಗ್ಲಿಷ್ ಅನುವಾದ ಸಲ್ಲಿಕೆ ಮಾಡಿದರು.
ಪ್ರತಾಪ್ ಸಿಂಹ ಪರ ವಕೀಲರು ಮಂಡಿಸಿದ್ದ ವಾದಕ್ಕೆ ಪ್ರತಿಯಾಗಿ, ಈ ದೇಶದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುವುದು ತಪ್ಪಲ್ಲವಲ್ಲ. ನಿಮ್ಮ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ ಸಿಜೆ ವಿಭು ಬಖ್ರು ಪ್ರಶ್ನೆ ಮಾಡಿದರು. ನಿಮ್ಮ ಅಭಿಪ್ರಾಯವನ್ನು ಕೂಡಾ ಸೂಕ್ತ ವೇದಿಕೆಯಲ್ಲಿ ಹೇಳಬಹುದು. ಆದರೆ ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ ಎಂದರು.
ಪೂಜಾರಿಯ ಪೂಜೆಯ ಹಕ್ಕನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ಆದರೆ ಇಲ್ಲಿ ನಿಮ್ಮ ಯಾವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಸಿಜೆ ಪ್ರಶ್ನಿಸಿದರು. ಆಗ ಪ್ರತಾಪ್ ಸಿಂಹ ಪರ ವಕೀಲರು, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ಸಂಪ್ರದಾಯವಿದೆ. ಆದರೆ, ಬಾನು ಮುಷ್ತಾಕ್ ಅವರಿಂದ ಉದ್ಘಾಟನೆಗೆ ವಿರೋಧವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶಿಷ್ಟಾಚಾರ ಪಾಲಿಸುವುದು ಬೇರೆ ವಿಚಾರ. ಆದರೆ ನಿಮ್ಮ ಕಾನೂನಾತ್ಮಕ ಹಕ್ಕಿನ ಬಗ್ಗೆ ವಾದ ಮಂಡಿಸಿ ಎಂದಿದೆ. ಅಲ್ಲದೆ, ಧರ್ಮವನ್ನು ಪಾಲಿಸುವ ಹಕ್ಕನ್ನು ಸಂವಿಧಾನದಲ್ಲಿ ಗುರುತಿಸಲಾಗಿದೆ ಎಂದಿದೆ. ಪ್ರತಾಪ್ ಸಿಂಹ ಮಾತ್ರವಲ್ಲದೆ ಟಿ. ಗಿರೀಶ್ ಕುಮಾರ್, ಹೆಚ್.ಎಸ್.ಗೌರವ್ ಎಂಬವರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವುಗಳನ್ನೂ ಕೋರ್ಟ್ ವಜಾಗೊಳಿಸಿದೆ.


