ಚಿಕ್ಕಮಗಳೂರು: ನಗರದ ಬಾರ್ ಮಾಲೀಕನನ್ನು ನಿರ್ದಯವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಲ್ಕತ್ತಾ ಮೂಲದ ರುದ್ರ, ಆಂಧ್ರ ಪ್ರದೇಶದ ಅದೋನಿಯ ವೀರ ಶೇಖರ್, ತುಮಕೂರಿನ ವಿನಿ ಹಾಗೂ ಸ್ಥಳೀಯ ನಿವಾಸಿ ಹನುಮಂತ ಎಂದು ಗುರುತಿಸಲಾಗಿದೆ. ಈ ನಾಲ್ವರೂ ಜ.20ರಂದು ನಗರದ ಬಾರ್ ಒಂದರ ಮಾಲೀಕರಾದ ತೇಜಸ್ವಿ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು.
ಹಲ್ಲೆಯ ಬಳಿಕ ಪ್ರಜ್ಞೆ ತಪ್ಪಿದ ತೇಜಸ್ವಿಯನ್ನು ಆರೋಪಿಗಳು ಸುಮಾರು ಒಂದು ಕಿಲೋ ಮೀಟರ್ ದೂರದ ಬಯಲಲ್ಲಿ ಎಸೆದು ಪರಾರಿಯಾಗಿದ್ದರು. ಜ.21ರಂದು ಬೆಳಗ್ಗೆ ಆಟೋ ಚಾಲಕರೊಬ್ಬರು ಅವರನ್ನು ಕಂಡು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಾವೇ ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.



