ಗದಗ: ಬೈಕ್‌ನಲ್ಲಿ ಹೊರಟಿದ್ದ ಇಬ್ಬರನ್ನು ತಡೆದು ದರೋಡೆ ಮಾಡಲು ಯತ್ನಸಿದ ಇಬ್ಬರನ್ನು ಬೆಟಗೇರಿ ಬಡಾವಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದ ಘಟನೆ ಜರುಗಿದೆ.
ಬಂಧಿತರನ್ನು ವಿಜಯನಗರ (ಹೊಸಪೇಟೆ) ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಾಡರಹಳ್ಳಿ ಗ್ರಾಮದ ಸಂಜೀವ ಸುಂಕಪ್ಪ ಹಾಗೂ ರಾಜಪ್ಪ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ.
ಇಲ್ಲಿನ ಸಂಭಾಪೂರ ರಸ್ತೆಯ ಸಿದ್ಧಾರ್ಥ ಕಾಲೋನಿ ಬಳಿ ಈ ಘಟನೆ ನಡೆದಿದ್ದು, ನರಗುಂದದ ನಿವಾಸಿ ನಜೀರ್ ಅಹ್ಮದ್ ಅತ್ತಾರ ಹಾಗೂ ಬೆಟಗೇರಿಯ ರಹಮತ್ ಎನ್ನುವರು ಸಂಭಾಪೂರ ಕಡೆಗೆ ಹೊರಟಾಗ ಏಕಾಏಕಿ ಬೈಕ್ ತಡೆದ ಇಬ್ಬರು ರಾಡ್, ಚಾಕು ತೋರಿಸಿ ಹಣ, ಬಂಗಾರ ಹಾಗೂ ಮೊಬೈಲ್ ಕೊಡಿ, ಇಲ್ಲದಿದ್ದರೆ ನಿಮ್ಮನ್ನು ಇಲ್ಲಿಯೇ ಮುಗಿಸಿಬಿಡ್ತೀವಿ ಎಂದು ನಜೀರ್ ಅಹ್ಮದ್ ಹಾಗೂ ರಹಮತ್ ಬಳಿ ಇದ್ಷ ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಓಡಿ ಹೋಗಿದ್ದರು.
ತಕ್ಷಣವೇ ನಜೀರ್ ಅಹ್ಮದ್ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ, ಎಸ್ಪಿ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಬೆಟಗೇರಿ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಎ. ಗುಡ್ಡಿಮಠ, ಮಂಜುನಾಥ್ ಗಾಣಿಗೇರ ಹಾಗೂ ಚನ್ನಬಸಪ್ಪ ಮಾದರ ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ದರೋಡೆಕೋರರನ್ನು ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾದರು. ಪೊಲೀಸರನ್ನು ನೋಡಿದ ಉಳಿದ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಬಂಧಿತರ ಮೇಲೆ ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಎಂದು ನಂಬಿಸಿ ಮೋಸ ಮಾಡಿದ ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧೆಡೆ ಹಲವಾರು ಕೇಸ್‌ಗಳಿವೆ ಎಂದು ಎಸ್ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ.
ಬಡಾವಣೆ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಬಿ.ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ 0086/2023,IPC 1860 (U/s-393) ಅಡಿಯಲ್ಲಿ
ಪ್ರಕರಣ ದಾಖಲಾಗಿದೆ.